

ಕಲಬುರಗಿ: ಕನ್ನಡ ಭಾಷೆಯ ವೈವಿಧ್ಯ, ಬೆಳವಣಿಗೆಗೆ ಕವಿ-ಸಾಹಿತಿಗಳ ಕೊಡುಗೆ ಅಪಾರ. ಅವರು ರಚಿಸಿದ ಸಾಹಿತ್ಯ ಮತ್ತು ಗೀತೆಗಳ ಮೂಲಕ ಕನ್ನಡದಲ್ಲಿನ ಭಾವನೆಗಳ ಜತೆಗೆ ಕನ್ನಡಿಗರ ಮನಸ್ಸುಗಳು ಬೆರೆತಿದ್ದು, ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತವಾಗಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ನಗರದ ರಂಗಾಯಣ ಸಭಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಭ್ರಮದ ೨ನೇ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಅಮೋಘವರ್ಷ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ, ನೆಲ-ಜಲ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ಪರಿಸರ ಸಂಪನ್ಮೂಲ ಸಮೃದ್ಧವಾಗಿದೆ. ಶರಣರು, ಕವಿಗಳು, ಸಾಹಿತಿಗಳು, ಕಲಾವಿದರು, ಹೋರಾಟಗಾರರ ಪರಿಶ್ರಮದಿಂದ ಕನ್ನಡದ ಹೆಸರು ವಿಶ್ವದೆತ್ತರಕ್ಕೆ ಬೆಳೆದಿದೆ. ಸಾಹಿತ್ಯ, ಪರಿಸರದಿಂದಲೂ ಶ್ರೀಮಂತ ನಾಡು ನಮ್ಮದು. ಕಲಾವಿದರು, ಸಾಹಿತಿಗಳಿಗೆ ಕೇಂದ್ರ ಸರ್ಕಾರದ ಸೌಲಭ್ಯದ ಪ್ರಯೋಜನೆಗಳ ಬಗ್ಗೆ ಗಮನಕ್ಕೆ ತಂದರೆ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್ ಮಾತನಾಡಿ, ತಾಲೂಕಿಗೊಂದು ರಂಗಮಂದಿರ ನಿರ್ಮಿಸಿದರೆ ತಾಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ನಾಡು-ನುಡಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸಂಘ-ಸಂಸ್ಥೆಯವರಿಗೆ ಸಹಕಾರಿ ಆಗಲಿದೆ ಎಂದರು.
ಸಮ್ಮೇಳನಾಧ್ಯಕ್ಷ ಗುರಪ್ಪ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಎ.ಬಿ. ಹಿರೇಮಠ, ಪಾಂಡವಪುರ ಮಂಜುನಾಥ, ಬಿ.ಎಸ್. ಮಾಲಿಪಾಟೀಲ್, ಮಹೇಶಬಾಬು ಸುರ್ವೆ, ಅಕ್ರಂ ಪಾಶಾ ಇತರರಿದ್ದರು.