

ಬೆಳಗಾವಿ: ಎಲ್ಲಿ ನೋಡಿದಲ್ಲಿ ಹಳದಿ-ಕೆಂಪು ಬಣ್ಣದ ಶಾಲು, ಬಾನೆತ್ತರಕ್ಕೆ ಹಾರಾಡಿದ ಕನ್ನಡ ಬಾವುಟಗಳು, ಮುಗಿಲು ಮುಟ್ಟಿದ ನಾಡಾಭಿಮಾನದ ಜೈಕಾರ, ರಾರಾಜಿಸಿದ ಕರ್ನಾಟಕ ರತ್ನ ದಿ. ಪುನೀತ್ ರಾಜ್‌ಕುಮಾರ ಭಾವಚಿತ್ರ, ಜೇನುಗೂಡಿನಂತೆ ಕಂಡುಬಂದ ಜನಸಾಗರ.
ಗಡಿನಾಡು ಕುಂದಾನಗರಿ ಬೆಳಗಾವಿಯಲ್ಲಿ ಜರುಗಿದ 67ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ರಾಜ್ಯೋತ್ಸವ ಮೆರವಣಿಗೆಯುದ್ದಕ್ಕೂ ಯುವಕರು ಕನ್ನಡ ಹಾಡುಗಳಿಗೆ ಉತ್ಸಾಹದಿಂದ ನರ್ತಿಸಿದರು. ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದರೂ ಗಲಾಟೆಗೆ ಆಸ್ಪದವಿಲ್ಲದಂತೆ ಕನ್ನಡಿಗರು ಸಂಭ್ರಮಿಸಿದರು. 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ, ಹತ್ತು ಮೀಟರ್ ಅಗಲದ ಕನ್ನಡ ಧ್ವಜಗಳು ಮೆರವಣಿಗೆಯಲ್ಲಿ ಜನರ ಗಮನ ಸೆಳೆದವು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಪಾಲಕರ ಜತೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ, ಮಂಗಳವಾರ ಬೆಳಗಾವಿ ನಗರ ಅಕ್ಷರಶಃ ಕನ್ನಡಮಯವಾಗಿತ್ತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಸುಮಾರು 42 ರೂಪಕಗಳು ಪಾಲ್ಗೊಂಡು ಜನಮನ ಸೆಳೆದವು.
ಕನ್ನಡಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಜಾನಪದ ಕಲಾ ತಂಡಗಳ ಪ್ರದರ್ಶನ, ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸಿದ ರೂಪಕಗಳು ನಾಡಾಭಿಮಾನ ಇಮ್ಮಡಿಗೊಳಿಸಿದವು. ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕರಡಿ ಮಜಲು, ಡೊಳ್ಳು ಕುಣಿತ, ಹಲಗೆ ವಾದನ, ಚರ್ಮವಾದ್ಯ ಸೇರಿದಂತೆ 20 ಕ್ಕೂ ಅಧಿಕ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ವಿವಿಧ ಕನ್ನಡಪರ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ 125 ಕ್ಕೂ ಅಧಿಕ ರೂಪಕಗಳು ಮೆರವಣಿಗೆಗೆ ಉದ್ದಕ್ಕೂ ರಂಗುತಂದವು.
ಹೋಳಿಗೆ ಚಪ್ಪರಿಸಿದ ಕನ್ನಡಿಗರು: ನಗರದ ಸರ್ಕಾರಿ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಹುಕ್ಕೇರಿ ಹಿರೇಮಠದಿಂದ ವ್ಯವಸ್ಥೆ ಮಾಡಿದ್ದ ಹೋಳಿಗೆ ಭೋಜನ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಗೋವಿಂದ ಕಾರಜೋಳ, ಚಲನಚಿತ್ರ ನಟ ಸಾಯಿಕುಮಾರ ಅವರು ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಸಾವಿರಾರು ಜನರು ಸರತಿ ನಿಂತು ಹೋಳಿಗೆ ಚಪ್ಪರಿಸಿ ರಾಜ್ಯೋತ್ಸವ ಸಂಭ್ರಮಿಸಿದರು.
ಪುನೀತ್‌ಗೆ ವಿಶೇಷ ನಮನ: ಕುಂದಾನಗರಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ಮಾರ್ಗದುದ್ದಕ್ಕೂ ಸಾವಿರಾರು ಜನರು ಪುನೀತ್‌ರಾಜಕುಮಾರ್ ಭಾವಚಿತ್ರ ಕೈಯಲ್ಲಿ ಹಿಡಿದು ವಿಶೇಷ ನಮನ ಸಲ್ಲಿಸಿದರು. ಪುನೀತ್ ರಾಜ್‌ಕುಮಾರ ನಟಿಸಿರುವ ಚಲಚಿತ್ರಗಳ ಹಾಡುಗಳಿಗೆ ನೃತ್ಯ ಮಾಡುತ್ತ ಅಭಿಮಾನಿಗಳು ಅಪ್ಪುವನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಂಡರು. ಕೆಲ ಅಭಿಮಾನಿಗಳು ಮೈಮೇಲೆ, ಕೈಯಲ್ಲಿ ಅಪ್ಪು ಚಿತ್ರಗಳನ್ನು ಬಿಡಿಸಿಕೊಂಡರೆ ಇನ್ನೂ ಕೆಲವರು ಪುನೀತ್ ರಾಜ್‌ಕುಮಾರ ಅವರ ಭಾವಚಿತ್ರಗಳಿರುವ ಟೀ ಶರ್ಟ್ ಹಾಕಿಕೊಂಡು ಅಭಿಮಾನ ಮೆರೆದರು.
ಹೊಸ ಇತಿಹಾಸ ಸೃಷ್ಟಿಸಿದ ಮೆರವಣಿಗೆ: ಗಡಿನಾಡು ಬೆಳಗಾವಿ ನಗರದಲ್ಲಿ ಜರುಗಿದ 67 ನೇ ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಮೆರವಣಿಗೆ ಹೊಸ ಇತಿಹಾಸ ಸೃಷ್ಟಿಸಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ರಾಜ್ಯೋತ್ಸವ ಮೆರವಣಿಗೆ ತಡರಾತ್ರಿವರೆಗೂ ನಡೆಯಿತು. ಕೇಂದ್ರ ಬಸ್ ನಿಲ್ದಾಣ, ಅಶೋಕ ವೃತ್ತ, ಶಹಾಪುರ ಬಸವೇಶ್ವರ ವೃತ್ತ, ಕಾಲೇಜು ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕಾಕತಿ ವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ಕಂಬಳಿ ಖೂಟ, ಮಾರುತಿ ಗಲ್ಲಿ, ಹುತಾತ್ಮ ಚೌಕ, ಕಿರ್ಲೋಸ್ಕರ್ ರಸ್ತೆ, ಬೋಗಾರವೇಸ್ ವೃತ್ತ, ಕಾಲೇಜ್ ರಸ್ತೆ ಮಾರ್ಗಗಳಲ್ಲಿ ಕಿಕ್ಕಿರಿದ ಜನರು ಮಧ್ಯ ನಡೆದ ಅದ್ದೂರಿ ಮೆರವಣಿಗೆಯಲ್ಲಿ 3 ಲಕ್ಷಕ್ಕೂ ಅಧಿಕರ ಜನರು ಭಾಗವಹಿಸುವ ಮೂಲಕ ರಾಜ್ಯದಲ್ಲಿಯೇ ಹೊಸ ದಾಖಲೆ ನಿರ್ಮಿಸಿದರು.
ಅಚ್ಚರಿಗೆ ಒಳಗಾದ ಅಧಿಕಾರಿಗಳು: ಬೆಳಗಾವಿ ನಗರದಲ್ಲಿ ಜರುಗಿದ ಅದ್ದೂರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ಕಂಡು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹಾಗೂ ಎಸ್‌ಪಿ ಡಾ.ಸಂಜೀವ ಪಾಟೀಲ ಅಚ್ಚರಿಗೆ ಒಳಗಾಗಿದ್ದಾರೆ. ಬೆಳಗಾವಿಯಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಜರುಗುತ್ತದೆ ಎಂದು ಕೇಳಿದ್ದೇವೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರುತ್ತಾರೆ ಎಂಬ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಮ್ಮ ಸೇವಾ ವೃತ್ತಿಯಲ್ಲಿ ಎಂದೂ ಮರೆಯದ ದಿನವಾಗಿ ಬೆಳಗಾವಿ ರಾಜ್ಯೋತ್ಸವ ಮೆರವಣಿಗೆ ಉಳಿಯಲಿದೆ ಎಂದು ಅಧಿಕಾರಿಗಳು ಅಭಿಮಾನ ವ್ಯಕ್ತಪಡಿಸಿದ್ದಾರೆ.