

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಕವಿ ಮನಸ್ಸಿನ ರಾಜಕಾರಣಿ ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ಅವರು ರಚಿಸಿದ ಕಾವ್ಯದ ಕೃತಿ ಹೊರ ಬಂದ ನಂತರವಷ್ಟೇ ಈ ಬಗ್ಗೆ ಅನೇಕರಿಗೆ ತಿಳಿಯಿತು. ಅವರ ಕಾವ್ಯಗಳಿಗೆ ರಾಷ್ಟ್ರ ಭಕ್ತಿಯೇ ಮೂಲದ್ರವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎ. ರಂಗಸ್ವಾಮಿ ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟ, ಎಚ್.ವಿ.ರಾಜೀವ್ ಸ್ನೇಹ ಬಳಗ, ವೀರ ಸಾವರ್ಕರ್ ಯುವ ಬಳಗ, ಇನೊವೇಟಿವ್ ಸಂಸ್ಥೆ ವತಿಯಿಂದ ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ರಚನೆಯ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಕನ್ನಡಕ್ಕೆ ಅನುವಾದಿಸಿರುವ ‘ಹೊಸ ದಿಕ್ಕಿನ ಹಾಡು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ನರೇಂದ್ರ ಮೋದಿ ಅವರ ಕೃತಿಯನ್ನು ಕನ್ನಡಕ್ಕೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಸೊಗಸಾದ ರೀತಿಯಲ್ಲಿ ಅನುವಾದಿಸಿದ್ದಾರೆ. ಮೋದಿ ಅವರ ಕವಿತೆಗಳು ಭಾವತೀವ್ರತೆ ಮೂಲಕ ಸೆಳೆಯುತ್ತಿವೆ. ಕೃತಿಯಲ್ಲಿ ಬಹುತೇಕ ಕಾವ್ಯಗಳಿಗೆ ರಾಷ್ಟ್ರ ಭಕ್ತಿಯೇ ಮೂಲದ್ರವ್ಯವಾ ಗಿದ್ದು, ಇನ್ನುಳಿದ ಕಾವ್ಯಗಳು ಆಧ್ಯಾತ್ಮ, ಪ್ರಕೃತಿ, ದಿನ ದಲಿತರ ಕುರಿತು ರಚನೆಯಾಗಿದೆ ಎಂದರು.
ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್, ವೀರ ಸಾವರ್ಕರ್ ಯುವ ಬಳಗ ಅಧ್ಯಕ್ಷ ರಾಕೇಶ್ ಭಟ್, ಸಹಕಾರಿ ಧುರೀಣ ಜಗದೀಶ್ ಹೆಬ್ಬಾರ್, ಇನೊವೇಟಿವ್ ಅಧ್ಯಕ್ಷ ಜಿ.ಎಸ್. ಭಟ್ಟ, ಲೇಖಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಇದ್ದರು.