

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆನಗಲ್ ಶ್ಯಾಮರಾವ್ 1903ರಲ್ಲಿ ಕರ್ನಾಟಕ ಏಕೀಕರಣ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮೊಟ್ಟ ಮೊದಲು ಭಾಷಣ ಮಾಡುವ ಮೂಲಕ ಏಕೀಕರಣದ ಮೊದಲ ಧ್ವನಿ ಸಂಘವು ಎತ್ತಿತ್ತು ಎಂದು ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು 1907ರಲ್ಲಿ ಪ್ರಕಟಿಸಿದ ವಾಗ್ಭೂಷಣ ಪತ್ರಿಕೆಯಲ್ಲಿ ಏಕೀಕರಣ ಕುರಿತು ಮೊಟ್ಟ ಮೊದಲ ಲೇಖನ ಬರೆದ ಹೆಗ್ಗಳಿಕೆ ಆಲೂರ ವೆಂಕಟರಾವ್ ಅವರದ್ದು. ಭಾಷೆ ಅಂದರೆ ಬದುಕು. ಬದುಕು ಭಾವನೆಯಿಂದ ಕೂಡಿರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಂತಕವಿಗಳು, ಸಿದ್ದಯ್ಯ ಪುರಾಣಿಕ, ಜಿ. ಪಿ. ರಾಜರತ್ನಂ, ದ.ರಾ. ಬೇಂದ್ರೆ ಅಂತಹ ಮಹಾನುಭಾವರು ಏಕೀಕರಣದ ಮೂಲಕ ಕರ್ನಾಟಕ ಕಟ್ಟುವ ಧ್ಯೇಯೋದ್ದೇಶಗಳ ಮೂಲ ಅಂಶಗಳ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಳಿನಿ ಬೆಂಗೇರಿ ಮಾತನಾಡಿ, ಇಂಗ್ಲಿಷ ಸಂಪರ್ಕ ಭಾಷೆಯಾದರೆ ಕನ್ನಡ ಹೃದಯದ ಭಾಷೆ.
ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಹೆಮ್ಮೆ ಇರಬೇಕು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದರೆ ಕನ್ನಡ ಕಲಿಯಲು ಮಕ್ಕಳಿಗೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಡಾ. ಧನವಂತ ಹಾಜವಗೋಳ, ಕೆ.ಜಿ. ದೇವರಮನಿ, ಸಂಜೋತಾ ಶಿರಸಂಗಿ, ದತ್ತಾತ್ರೇಯ ತಾಪಸಕರ, ಪರಮೇಶ್ವರ ಗೆಜ್ಜಿ, ಜಯಾನಂದ ಹಟ್ಟಿ, ಶಿವಾನಂದ ನರಹಟ್ಟಿ, ವಿದ್ಯಾರ್ಥಿಗಳು, ಇತರರು ಇದ್ದರು.