ಕನ್ನಡ ಹಾಡಿಗೆ ಕುಣಿದವರ ಮೇಲೆ ಹಲ್ಲೆ

27Jaggu2
ಬೆಳಗಾವಿ ಗ್ರಾಮೀಣ ಠಾಣೆ ಎದುರು ಕನ್ನಡ ಸಂಘಟನೆ ಕಾರ್ಯಕರ್ತರು ಜಮಾವಣೆಯಾಗಿರುವುದು.
Published on

ಬೆಳಗಾವಿ: ಬೆಳಗಾವಿ ಅಧಿವೇಶನ ವೇಳೆ ನಗರದಲ್ಲಿ ಕಲ್ಲು ತೂರಾಟ ಮಾಡಿ ಗೂಂಡಾವರ್ತನೆ ತೋರಿದ್ದ ಎಂಇಎಸ್ ಪುಂಡರು ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ. ತಾಲೂಕಿನ ಧಾಮಣೆ ಗ್ರಾಮದಲ್ಲಿ ಗುರುವಾರ ರಾತ್ರಿ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ಕನ್ನಡ ಹಾಡಿಗೆ ಕುಣಿದ ವಧು-ವರ ಸೇರಿ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿ, ದರ್ಪ ತೋರಿದ್ದಾರೆ. ಗಾಯಗೊಂಡಿರುವ ವರ ಸಿದ್ದು ಸೈಬಣ್ಣವರ, ವಧು ರೇಷ್ಮಾ, ಸಿದ್ದು ಸಹೋದರ ಭರಮಾ ಸೈಬಣ್ಣವರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ ಮೆರವಣಿಗೆ ಮೂಲಕ ವಧು-ವರರನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಕನ್ನಡ ಧ್ವಜ ಹಿಡಿದು ‘ಕರುನಾಡೇ…‘ ಹಾಡಿಗೆ ಯುವಕರು ಕುಣಿಯುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಎಂಇಎಸ್‌ನವರು, ಕನ್ನಡ ಧ್ವಜ ಹಿಡಿದು ಕನ್ನಡ ಹಾಡಿಗೆ ಕುಣಿಯುತ್ತಿರುವುದೇಕೆ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪುಂಡರು ‘ರಾಣಿ ಚನ್ನಮ್ಮ ನಗರ’ ಎಂದು ಗ್ರಾಮದಲ್ಲಿ ಅಳವಡಿಸಿದ್ದ ಕನ್ನಡದ ಬೋರ್ಡ್ ಎದುರು ‘ಧರ್ಮವೀರ ಸಂಭಾಜಿ ನಗರ’ ಎಂಬ ಬೋರ್ಡ್ ಹಾಕಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಜಯ ಯಳ್ಳೂರಕರ, ಆಕಾಶ ಚೌಗುಲೆ, ಮಹೇಶ ಸೇರಿ 9 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಧಾಮಣೆ ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಬಡಿಗೆಯಿಂದ ಹೊಡೆದರು: ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರನ ಸಹೋದರ ಭರಮಾ ಪ್ರತಿಕ್ರಿಯಿಸಿ, ಮೆರವಣಿಗೆ ಮಾಡುತ್ತಿದ್ದ ನಮ್ಮನ್ನು ಎಂಇಎಸ್‌ನವರು ಪಕ್ಕಕ್ಕೆ ಕರೆದು ಜಗಳ ತೆಗೆದರು. ಬಡಿಗೆಯಿಂದ ಹೊಡೆದರು. ನಮ್ಮ ಮನೆ ಎದುರು ಚನ್ನಮ್ಮನ ಫಲಕ ಹಾಕಿದ್ದೇವೆ. ಹೀಗಾಗಿ, ಪದೇ ಪದೆ ಗಲಾಟೆ ತೆಗೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಮದುವೆ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ 9 ಜನರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಆರು ತಿಂಗಳ ಹಿಂದೆ ಸೈಬಣ್ಣವರ ಕುಟುಂಬಕ್ಕೆ ಸೇರಿದ ಬೈಕ್ ಸುಟ್ಟಿದ್ದಾರೆಂಬ ಮಾಹಿತಿ ಬಂದಿದೆ. ಗಲಾಟೆ ಯಾವ ಕಾರಣಕ್ಕೆ ಆಗಿದೆ ಎಂಬ ಬಗ್ಗೆ ಸಿಬ್ಬಂದಿ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಕನ್ನಡಪರ ಸಂಘಟನೆಗಳ ಆಕ್ರೋಶ

ಕನ್ನಡ ಹಾಡಿಗೆ ಕುಣಿದಿದ್ದಕ್ಕೆ ಹಲ್ಲೆ ಮಾಡಿರುವ ಎಂಇಎಸ್ ಕಾರ್ಯಕರ್ತರ ವಿರುದ್ಧ ಕನ್ನಡಪರ ಸಂಘಟನೆಗಳು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಎಂ.ಬಿ. ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಧಾಮಣೆ ಗ್ರಾಮದಲ್ಲಿ ಎಂಇಎಸ್ ಪುಂಡರು ಮಚ್ಚು, ಲಾಂಗ್ ಹಿಡಿದು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಪೊಲೀಸರು ನಿಗಾ ವಹಿಸಿದ್ದಾರೆ. ಸ್ಥಳದಲ್ಲಿ ಸಿಎಆರ್ ತುಕಡಿ ನಿಯೋಜಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net