ಕನ್ನಡ ಸೇವೆ ದೊರೆತಿದ್ದು ನಮ್ಮ ಸೌಭಾಗ್ಯ

NRGL MERAVANIGE
Published on

ನರೇಗಲ್ಲ: ನಮ್ಮ ಶ್ರೀಮಠದಲ್ಲಿ ಬಹಳ ದಿನಗಳಿಂದಲೂ ಕನ್ನಡ ಸೇವೆ ಮಾಡುವ, ಕನ್ನಡದ ಯಾವುದಾದರೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬ ಅಭಿಲಾಷೆ ಬಹಳಷ್ಟಿತ್ತು. ಅದಕ್ಕೆ ಈ ವರ್ಷದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ದೊರೆತಿರುವುದು ನಮ್ಮೆಲ್ಲ ಸದ್ಭಕ್ತರ ಸೌಭಾಗ್ಯ. ಅದಕ್ಕಾಗಿ ನಾವೆಲ್ಲರೂ ತುಂಬಾ ಆನಂದಿತರಾಗಿದ್ದೇವೆ ಎಂದು ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ನಿಡಗುಂದಿ ಗ್ರಾಮದ ಶ್ರೀ ಜೋಡು ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಗುರುವಾರ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಸರ್ವಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ವಿಚಾರ ಬಂದಾಗ ಮುನ್ನೆಲೆಗೆ ಬಂದ ಹೆಸರು ನಮ್ಮ ಗುರುಗಳಾದ ಎಂ. ಎ. ಹಿರೆವಡೆಯರದ್ದು. ವಯೋವೃದ್ಧರು, ಜ್ಞಾನವೃದ್ಧರಾದ ಅವರ ಆಯ್ಕೆ ಸೂಕ್ತ ಎಂದು ಎಲ್ಲರಿಗೂ ಅನ್ನಿಸಿದ್ದರಿಂದ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದರು.

ಮಿಥುನ್ ಪಾಟೀಲ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ವ್ಯಕ್ತಿಯ ವಿಕಸನಕ್ಕೆ ಸಾಕಷ್ಟು ಸಹಾಯ ಮಾಡುತ್ತವೆ. ತಾಲೂಕಿನ ಹಿರಿ, ಕಿರಿಯ ಸಾಹಿತಿಗಳು ಈ ಸಮ್ಮೇಳನದ ಲಾಭ ಪಡೆದುಕೊಂಡು ಪ್ರತಿಭೆ ಹೊರ ಹಾಕಬೇಕು ಎಂದರು.

ನಿಡಗುಂದಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸರ್ವಾಧ್ಯಕ್ಷರ ಮೆರವಣಿಗೆಯು ನಂತರ ನಿಡಗುಂದಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನರೇಗಲ್ಲ, ನಿಡಗುಂದಿಕೊಪ್ಪ, ಹಾಲಕೆರೆ, ಜಕ್ಕಲಿ ಮತ್ತಿತರ ಗ್ರಾಮಗಳ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net