

ಮೈಸೂರು: ರಾಘವಾಂಕನ ಕಾವ್ಯದಲ್ಲಿ ಸತ್ಯ ಮತ್ತು ಹರಿಹರನ ರಗಳೆಯಲ್ಲಿ ಭಕ್ತಿ ಬಹುದೊಡ್ಡ ಮೌಲ್ಯಗಳು ಎಂದು ಜಾನಪದ ವಿದ್ವಾಂಸ ಪ್ರೊ. ಕೃಷ್ಣಮೂರ್ತಿ ಹನೂರು ಹೇಳಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಿಗಾಗಿ ಇತ್ತೀಚೆಗೆೆ ಆಯೋಜಿಸಿದ್ದ 52ನೇ ಕನ್ನಡ ಪುನಶ್ಚೇತನ ಶಿಬಿರದಲ್ಲಿ ಹರಿಹರ ಮತ್ತು ಸಾಮಾಜಿಕತೆ, ರಾಘವಾಂಕ ಮತ್ತು ಸಾಮಾಜಿಕತೆ ವಿಷಯ ಮಂಡಿಸಿದರು.
ಕನ್ನಡ ಸಾಹಿತ್ಯದ ಮೊದಲ ಬಂಡಾಯಗಾರ ಹರಿಹರ. ಹರಿಹರನಲ್ಲಿ ಭಕ್ತನು ದೇವರಿಗಿಂತಲೂ ದೊಡ್ಡವನು. ಭಕ್ತಿ, ಧ್ಯಾನ ಎಂಬುದು ಯಾವುದೇ ವಸ್ತುವನ್ನು ಪಡೆಯುವುದಕ್ಕಲ್ಲ. ಅವು ಆತ್ಮ ಸಂತೋಷಕ್ಕಾಗಿ ಎಂದರು.
ಹರಿಹರನ ರಗಳೆಯಲ್ಲಿ ಭಕ್ತಿ ಬಹುದೊಡ್ಡ ಮೌಲ್ಯವಾದರೆ, ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಬಹುದೊಡ್ಡ ಮೌಲ್ಯವಾಗಿ ಸ್ವೀಕೃತವಾಗುತ್ತದೆ. ಈ ಕಾವ್ಯವನ್ನು ಕೇಳಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಚನ ಚಳವಳಿಯು ಸಂತ ಮಾರ್ಗ. ಹಿಂದಿನ ಯುದ್ಧ ಮಾರ್ಗಕ್ಕಿಂತ ಭಿನ್ನವಾದದ್ದು. ‘ಕಾಂಚಾಣವೆಂಬ ನಾಯನೆಚ್ಚಿ ಕೆಟ್ಟನಯ್ಯ ... ಎನ್ನುತ್ತಾರೆ ಬಸವಣ್ಣ. ವಚನ ಸಾಹಿತ್ಯವು ಸ್ವ-ಅನುಭವದ ಮಾತುಗಳಿಂದ ಕೂಡಿದೆ. ಇದರ ಬಹುದೊಡ್ಡ ಆಶಯ ಕಾಯಕ ಎಂದು ಹೇಳಿದರು.
ಮೈಸೂರು ವಿವಿ ಕ್ಯಾಂಪಸ್ ಸೌಂದರ್ಯವು ಜಗತ್ತಿನ ಯಾವ ವಿವಿಯಲ್ಲೂ ಇಲ್ಲ. ಜಗತ್ತಿನ ಬೇರೆ ಬೇರೆ ಅಭಿವೃದ್ಧಿಶೀಲ ವಿವಿಗಳು ಬೇರೆ ರೀತಿ ಅಭಿವೃದ್ಧಿಯಾಗಿವೆ. ಸೌಂದರ್ಯದಲ್ಲಿ ನಮ್ಮ ಮಾನಸಗಂಗೋತ್ರಿ ಮೀರಿಸುವ ವಿವಿ ಮತ್ತೊಂದಿಲ್ಲ ಎಂದು ಬಣ್ಣಿಸಿದರು.
ಶಿಬಿರದ ಸಂಯೋಜಕರೂ ಆದ ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಎಂ.ಹೊಂಗನೂರು, ಮಾಳವೀಯ ಮಿಷನ್ ಶಿಕ್ಷಕ ತರಬೇತಿ ಕೇಂದ್ರ ನಿರ್ದೇಶಕಿ ಪ್ರೊ.ಎಚ್.ಜ್ಯೋತಿ , ಸಹಾಯಕ ಪ್ರಾಧ್ಯಾಪಕ ಡಾ.ಎಲ್.ನಂಜುಂಡಸ್ವಾಮಿ ಹಾಜರಿದ್ದರು.