ಕನ್ನಡ ಸಾಹಿತ್ಯಕ್ಕೆ ಬಿಆರ್‌ಎಲ್ ಕೊಡುಗೆ ಅಪಾರ, ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಬಣ್ಣನೆ

26ank news and photos 02
Published on

ಆನೇಕಲ್: ಸಾಹಿತ್ಯ ಲೋಕದಲ್ಲಿ ಹೊಸ ಪರಂಪರೆ ಪ್ರಾರಂಭಿಸಿದ ಕವಿ ಬಿಆರ್ ಲಕ್ಷ್ಮಣರಾವ್ ಅವರು ಕಾವ್ಯ, ಕಾದಂಬರಿ, ನಾಟಕ ಸೇರಿ ಸಾಹಿತ್ಯದ ಎಲ್ಲ ಪ್ರಕಾರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ತಿಳಿಸಿದರು.

ಅತ್ತಿಬೆಲೆ ಸಮೀಪದ ಗೆಸ್ಟ್‌ಲೈನ್ ಸಭಾಂಗಣದಲ್ಲಿ ಮಾತೃ ವಾತ್ಸಲ್ಯ ಪ್ರತಿಷ್ಠಾನ ಆಯೋಜಿಸಿದ್ದ ‘ಬಿಆರ್‌ಎಲ್ 75 ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿ, ಐವತ್ತು ವರ್ಷಗಳ ಹಿಂದೆ ಬಿಆರ್‌ಎಲ್ ರಚಿಸಿದ ‘ಗೋಪಿ ಮತ್ತು ಗಾಂಡಲೀನಾ’ ಐದು ದಶಕಗಳಾದರೂ ಜನಪ್ರಿಯತೆ ಗಳಿಸಿಕೊಂಡಿರುವುದು ಇವರ ಸಾಹಿತ್ಯದ ಶಕ್ತಿಯಾಗಿದೆ ಎಂದರು.

ಕಾವ್ಯ ಲೋಕದ ಅಜಾತ ಶತ್ರುವಾಗಿರುವ ಅವರು ಶಿಕ್ಷಕರು, ಹಾಡುಗಾರರು, ಕಲಾವಿದರು, ಮೃದು ಸ್ವಭಾವದ ಕವಿಯಾಗಿದ್ದಾರೆ. ಅವರ ಸಾಹಿತ್ಯದಲ್ಲಿ ಅನುಭವದ ನಾಡಿ ಮಿಡಿತವನ್ನು ಕಾವ್ಯ ರೂಪಕ್ಕೆ ತಂದು ಕೌಟುಂಬಿಕ ಮೌಲ್ಯಗಳಿಗೆ ಒತ್ತು ನೀಡಿದ್ದಾರೆ. 50 ವರ್ಷಗಳಿಂದಲೂ ಕಾವ್ಯ ಕೃಷಿಯಲ್ಲಿ ತೊಡಗುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಆನೇಕಲ್‌ನಲ್ಲಿ ಶಿಕ್ಷಕರಿಗಾಗಿ ಸುಗಮ ಸಂಗೀತ ಶಿಬಿರ ಆಯೋಜಿಸಲಾಗುವುದು. ಮುಂಬರುವ ದಿನಗಳಲ್ಲಿ ಸುಗಮ ಸಂಗೀತ ಸಮ್ಮೇಳನವನ್ನು ಆನೇಕಲ್‌ನಲ್ಲಿ ನಡೆಸುವ ಚಿಂತನೆಯಿದೆ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್ ಮಾತನಾಡಿ, ಐದು ದಶಕಗಳ ಕಾಲ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು 75ರ ವಯಸ್ಸಿನಲ್ಲೂ ನವೋನ್ಮೇಷದಂತಹ ಸಾಹಿತ್ಯ ಕೃತಿ ರಚಿಸಿದ್ದಾರೆ. ನಾಡು ಕಂಡ ಶ್ರೇಷ್ಠ ಕವಿ ಬಿಆರ್‌ಎಲ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರುವಂತಾಗಲಿ ಎಂದರು.

ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, ಆನೇಕಲ್‌ನೊಂದಿಗೆ ಸಾಹಿತ್ಯದ ಒಡನಾಟ ಹಲವು ವರ್ಷಗಳಿಂದ ಇದೆ. ಕಾಡಿನಲ್ಲಿ ಕವಿಗೋಷ್ಠಿ, ಕಾವ್ಯದ ಒಡನಾಟ ಸೇರಿ ಶಿಕ್ಷಕರು ಮತ್ತು ಸಾಹಿತ್ಯ ಪ್ರೇಮಿಗಳ ಜತೆಗೂಡಿ ಸಾಹಿತ್ಯದ ಕಾರ್ಯಕ್ರಮ ನಿರಂತರವಾಗಿ ನಡೆದಿವೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಕಂಠೀರವ ನೃತ್ಯ ಸಂಗೀತ ಸಭಾ ಅಧ್ಯಕ್ಷ ಪಿ.ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net