ಕನ್ನಡ ಸಾಹಿತ್ಯ ಲೋಕಕ್ಕೆ ಮೇಲುಕೋಟೆ ಕೊಡುಗೆ ಅನನ್ಯ

25mlk1
Published on

ಸಾಹಿತಿ ಎಸ್.ಎನ್. ಸಿಂಹ ಅಭಿಮತ -  ಸಮ್ಮೇಳನದ ಜಾಗೃತಿ ರಥಕ್ಕೆ ಸ್ವಾಗತ

ಮೇಲುಕೋಟೆ : ಕನ್ನಡ ಸಾಹಿತ್ಯ ಲೋಕಕ್ಕೆ ಖ್ಯಾತ ವರಕವಿ ಪು.ತಿ. ನರಸಿಂಹಾಚಾರ್ ಅವರ ಕೊಡುಗೆ ಅಪಾರ ಮತ್ತು ಅನನ್ಯವಾಗಿದೆ ಎಂದು ಸಾಹಿತಿ ಎಸ್.ಎನ್. ಸಿಂಹ ಹೇಳಿದರು.

ಮೇಲುಕೋಟೆಗೆ ಸೋಮವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರರಥ ಆಗಮಿಸಿದ್ದ ಸಂದರ್ಭ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಭಗವದ್ ಶ್ರೀ ರಾಮಾನುಜರ ಕರ್ಮಭೂಮಿಯಾಗಿರುವ ಮೇಲುಕೋಟೆಯು ಮೂರು ಶತಮಾನಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಂತೆಯೇ ಕನ್ನಡ ಭಾಷಾಭಿವೃದ್ಧಿಗೂ ಅಚ್ಚಳಿಯದ ಕೊಡುಗೆ ನೀಡುತ್ತಾ ಬಂದಿದೆ. ಮೇಲುಕೋಟೆ ಸಾಹಿತ್ಯರಚನೆಗೂ ಸ್ಫೂರ್ತಿ ತಾಣ. ಈ ನಿಟ್ಟಿನಲ್ಲಿ ಗೋಕುಲ ನಿರ್ಗಮನ ಎಂಬ ಖ್ಯಾತ ಗೇಯ ನಾಟಕ ಸೇರಿದಂತೆ ನೂರಾರು ಕೃತಿ ರಚಿಸಿದ, ‘ಯದುಗಿರಿಯ ಮೌನ’ದೊಂದಿಗೂ ಕಾವ್ಯಾನ್ವೇಷಣೆ ಮಾಡಿದ ಖ್ಯಾತ ಕವಿ ಪುತಿನ ಹೆಸರು ಅಜರಾಮರ ಎಂದವರು ಶ್ಲಾಘಿಸಿದರು.

ಸಂಸ್ಕೃತ ರಾಮಾಯಣ-ಮಹಾಭಾರತವನ್ನು ಪ್ರಪ್ರಥಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ದೇವ ಶಿಖಾಮಣಿ ಅಳಸಿಂಗಾಚಾರ್, 4 ಸಾವಿರ ದಿವ್ಯಪ್ರಬಂಧಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಸರ್ವೋದಯ ಪಾದಯಾತ್ರಿ ಅರೈಯರ್ ಶ್ರೀನಿವಾಸ ಅಯ್ಯಂಗಾರ್, ಕನ್ನಡ ಪತ್ರಿಕಾರಂಗದ ದಿಗ್ಗಜರಾದ ಖಾದ್ರಿಶಾಮಣ್ಣ, ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸೇರಿದಂತೆ ಹಲವು ಮಹನೀಯರು ಮೇಲುಕೋಟೆಗೆ ಕೀರ್ತಿ ತಂದಿದ್ದಾರೆ ಎಂದರು.

ಉಪತಹಶೀಲ್ದಾರ್ ರಾಜೇಶ್, ಗ್ರಾಪಂ ಉಪಾಧ್ಯಕ್ಷ ಜಿ.ಕೆ. ಕುಮಾರ್, ಪಿಡಿಒ ರಾಜೇಶ್ವರ, ಗ್ರಾಮ ಆಡಳಿತಾಧಿಕಾರಿ ರಮೇಶ್, ಗ್ರಾಪಂ ಉಪಾಧ್ಯಕ್ಷ ಜಿ.ಕೆ. ಕುಮಾರ್, ಸಾಹಿತಿ ಚಂದ್ರಶೇಖರಯ್ಯ ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಖರಡ್ಯ ಬಸವೇಗೌಡ, ಪಾಂಡವಪುರ ತಾಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಯದುಶೈಲ ಪ್ರೌಢಶಾಲೆ ಮುಖ್ಯ ಶಿಕ್ಷಕ ವಸಂತಕುಮಾರ್ ಸೇರಿದಂತೆ ಗ್ರಾಮದ ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಶ್ರೀ ವೀರಾಂಜನೇಯಸ್ವಾಮಿ ಸನ್ನಿಧಿ ಬಳಿ ಬಂದಾಗ ಗ್ರಾಪಂ ಅಧ್ಯಕ್ಷೆ ಮಣಿ ಮುರುಗನ್ ಪೂಜೆಮಾಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ಶತಮಾನದ ಕಂಡ ಶಾಲೆ ಅಭಿವೃದ್ಧಿಯಾಗಲಿ

ಪುತಿನ ಸೇರಿದಂತೆ ಹಲವು ಗಣ್ಯರು ವ್ಯಾಸಂಗಮಾಡಿದ, ಶತಮಾನ ಕಂಡ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಬಲವರ್ಧನೆ ಮಾಡುವ ಅಗತ್ಯವಿದೆ ಎಂದು ಸಾಹಿತಿ ಎಸ್.ಎನ್. ಸಿಂಹ

ಈ ಸಂದರ್ಭ ಹೇಳಿದರು. ಜಿಲ್ಲಾಡಳಿತ ಸಾಹಿತ್ಯ ಸಮ್ಮೇಳದ ಸವಿ ನೆನಪಿಗಾಗಿ ಹಳೆಯ ಶಾಲೆಗಳನ್ನು ಜೀರ್ಣೋದ್ಧಾರ ಮಾಡಿ ಆಧುನಿಕ ಸೌಕರ್ಯ ಕಲ್ಪಿಸಬೇಕಿದೆ ಎಂದರು. ನಿವೃತ್ತ ಮುಖ್ಯಶಿಕ್ಷಕ ವೆಂಕಟ ರಾಮೇಗೌಡ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಒಂದಿಷ್ಟು ಸೆಲ್ಫಿ ತೆಗೆಸಿಕೊಂಡು, ಊಟ ಮಾಡಿ ಬರುವುದಷ್ಟಕ್ಕೇ ಸಂಭ್ರಮ ಸೀಮಿತವಾಗದಿರಲಿ. ನಮಗೆ ಇಷ್ಟವಾಗುವ ಸಾಹಿತಿಗಳ ಪುಸ್ತಕಗಳನ್ನು ಖರೀದಿಸಬೇಕು. ನಿತ್ಯ ಮನೆಗೆ ಒಂದು ಕನ್ನಡ ಪತ್ರಿಕೆ ತರಿಸಿ ಓದುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net