ಕನ್ನಡ ಸಾಹಿತ್ಯ ಲೋಕಕ್ಕೆ ದಾಸ ಸಾಹಿತ್ಯ ಕೊಡುಗೆ ಅನನ್ಯ

31 vikram 5
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನ ಸಾಹಿತ್ಯದಂತೆ ದಾಸ ಸಾಹಿತ್ಯ ಜನಮಾನಸದಲ್ಲಿ ದಟ್ಟವಾಗಿ ಹಾಸು ಹೊಕ್ಕಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ದಾಸ ಸಾಹಿತ್ಯದ ಕೊಡುಗೆ ಅನನ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಉತ್ತರಾದಿಮಠ ದತ್ತಿ ನಿಮಿತ್ತ ಭಾನುವಾರ ಸಂಘದಲ್ಲಿ ಆಯೋಜಿಸಿದ್ದ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2023 ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಾಸ ಸಾಹಿತ್ಯದ ಬಗ್ಗೆ ಕರ್ನಾಟಕ ಸರ್ಕಾರ ಸಮ್ಮೇಳನಗಳನ್ನು ನಡೆಸಿ ಹರಿದಾಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಸ್ಮರಿಸಿಸುವಂತೆ ಮಾಡಿ ಹರಿದಾಸ ಸಾಹಿತ್ಯದ ಮೇಲೆ ಬೆಳಕು ಚೆಲ್ಲಬೇಕು. ಕನಕದಾಸರಿಗೆ ಮಹತ್ವ ನೀಡಿದಂತೆ ಪುರಂದರ ದಾಸರಿಗೂ ಮಹತ್ವ ನೀಡಬೇಕು ಎಂದರು.
ಪತ್ರಕರ್ತ ಬಂಡು ಕುಲಕರ್ಣಿ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸತ್ಯಪ್ರಮೋದ ಹರಿದಾಸರ ಪದ್ಯಗಳನ್ನು ತಲೆತಲಾಂತರದಿಂದ ಒಂದು ವೃತದಂತೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಈ ಹರಿದಾಸ ಸಾಹಿತ್ಯ ಉಳಿಯುವ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಹರಿದಾಸರ, ದೇವರ ಸ್ಮರಣೆ ಹಾಡುಗಳನ್ನು ಕಲಿಸಿಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಪಾಂಡುರಂಗಿ ಮಾತನಾಡಿ, 15 ವರ್ಷಗಳಿಂದ ದತ್ತಿ ಕಾರ್ಯಕ್ರಮದಡಿ ಸತ್ಯಪ್ರಮೋದ ಹರಿದಾಸ ಸಾಹಿತ್ಯಕ್ಕೆ ಪ್ರಚಾರ ನೀಡಿ, ಉಳಿಸಿ ಬೆಳೆಸುವ ಪ್ರಯತ್ನ ಅಭಿನಂದನೀಯ ಎಂದರು.
ಇದಕ್ಕೂ ಪೂರ್ವ ಭಜನಾ, ಮಹಿಳಾ ಮಂಡಳಗಳಿಗೆ ಏರ್ಪಡಿಸಿದ್ದ ಹರಿದಾಸರ ಹಾಡುಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಧಾರವಾಡದ ತೇಜಸ್ವಿನಿ ಭಜನಾ ಮಂಡಳಕ್ಕೆ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ಮಂದಹಾಸ ಮಹಿಳಾ ಮಂಡಳ ದ್ವಿತೀಯ, ವೃಂದಾವನ ಮಹಿಳಾ ಮಂಡಳ ಮತ್ತು ಧಾರವಾಡದ ಬೆಳ್ಳಿಬೆಟ್ಟ ಮಹಿಳಾ ಮಂಡಳ ತೃತೀಯ ಸ್ಥಾನ ಪಡೆದವು.
ಎಸ್‌ಡಿಎಂ ದಂತ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೃತಿಕಾ ಗುತ್ತಲ ಪ್ರಮಾಣ ಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net