ಕನ್ನಡ ಶಾಲೆಗಳೆಂದರೆ ತಾತ್ಸಾರ ಬೇಡ

Published on

ಕುಶಾಲನಗರ: ಪ್ರಸ್ತುತ ಭಾರತದ ಆರ್ಥಿಕ ವ್ಯವಸ್ಥೆ ಏರುಗತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಇದು ಬಲಿಷ್ಠವಾಗಲಿದೆ ಎಂದು ನಿವೃತ್ತ ರಾಯಭಾರಿ ಎನ್.ಪಾರ್ಥಸಾರಥಿ ಅಭಿಪ್ರಾಯಪಟ್ಟರು.


ಸಮೀಪದ ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ‘ಭಾರತ ದೇಶದ ಆರ್ಥಿಕ ಬೆಳವಣಿಗೆಯ ಮುನ್ನೋಟ ಹಾಗೂ ಸವಾಲುಗಳು ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಗ್ಗುರುತುಗಳು’ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಉತ್ತಮ ಸಾಧನೆ ಮಾಡಿರುವ ಮಹಾ ನಾಯಕರು ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳಲ್ಲೇ ಶಿಕ್ಷಣ ಪಡೆದಿದ್ದಾರೆ. ಕನ್ನಡ ಶಾಲೆಗಳೆಂದರೆ ತಾತ್ಸಾರ ಬೇಡ. ಭವ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು.


ದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳು, ಅವಕಾಶಗಳಿವೆ. ಇವುಗಳನ್ನು ಬಳಸಿಕೊಂಡು ಉತ್ತಮ ಸಾಧಕರಾಗಬೇಕು. ಹಿಂದೆಂದಿಗಿಂತಲೂ ಮುಂದಿನ ಹತ್ತಾರು ವರ್ಷಗಳಲ್ಲಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇಡಲಿದೆ. ಹಾಗಾಗಿ ಇಂದಿನ ಮಕ್ಕಳು ಭವಿಷ್ಯದ ಬಗ್ಗೆ ದೊಡ್ಡ ಕನಸು ಹೊಂದಿ ನಿರ್ದಿಷ್ಟ ಗುರಿ ತಲುಪಲು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.


ಸಾಹಿತಿ ಎನ್.ನಾಗರಾಜ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯೊಂದಿಗೆ ಹೊಸ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.


ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.


ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಭಾರದ್ವಾಜ್ ಕೆ.ಆನಂದತೀರ್ಥ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೋಶಾಧಿಕಾರಿ ಕೆ.ವಿ.ಉಮೇಶ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಎಂ.ಎನ್.ವೆಂಕಟನಾಯಕ್, ಎಂ.ಇ.ಮೊಹಿದ್ದೀನ್, ಜಿ.ಶ್ರೀಹರ್ಷ, ಎನ್.ಕೆ.ಮಾಲಾದೇವಿ, ಶಿಕ್ಷಕ ಸಿ.ಡಿ.ಲೋಕೇಶ್, ತೊರೆನೂರು ಸಾಗರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net