ಕನ್ನಡ ಶಾಲೆಗಳನ್ನು ಮರೆತ ಸರ್ಕಾರ

14 ydg 09
Published on

ಶಹಾಪುರ: ಮಾತೃಭಾಷೆ ಶಿಕ್ಷಣ ಕಡ್ಡಾಯವಾಗಿದ್ದು, ಸುಮಾರು ೩೦ ವರ್ಷಗಳಿಂದ ಖಾಸಗಿಯಾಗಿ ಉತ್ತಮ ಶಿಕ್ಷಣ ನೀಡುತ್ತಿರುವ, ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳಿಗೆ ಅನುದಾನ ನೀಡದೆ ಸರ್ಕಾರ ನಿರ್ಲಕ್ಷÈ ವಹಿಸುತ್ತಿದೆ ತಾಲೂಕು ಕನ್ನಡ ಮಾಧ್ಯಮ ಶಾಲೆಗಳ ಹೋರಾಟ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಪಾಟೀಲ್ ಕನ್ಯಕೋಳೂರ್ ಆರೋಪಿಸಿದ್ದಾರೆ.

ತಾಲೂಕು ಕನ್ನಡ ಮಾಧ್ಯಮ ಶಾಲೆಗಳ ಹೋರಾಟ ಸಮಿತಿ, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಕೃಪಾ ಸಂಘಟನೆ ಆಶ್ರಯದಲ್ಲಿ ಸೋಮವಾರ ಇಲ್ಲಿನ ತಹಸಿಲ್ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಡಿದ ಅವರು, ೧೯೯೫ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜತೆಗೆ, ವೇತನಾನುದಾನ ಭಾಗ್ಯ ನೀಡಬೇಕು. ಸರ್ಕಾರ ಸದನದಲ್ಲಿ ಈ ಕುರಿತು ಚರ್ಚಿಸುತ್ತದೆ ಹೊರತು, ಅನುಶಾಸನಕ್ಕೆ ತರುವಲ್ಲಿ ಹಿಂದೇಟು ಹಾಕುತ್ತಿದೆ. ಕನ್ನಡ ನೆಲದಲ್ಲಿ ಕನ್ನಡ ಶಾಲೆಗಳಿಗೆ ಸರ್ಕಾರ ಭದ್ರತೆ ನೀಡದಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಪ್ರಮುಖರಾದ ಮೂರ್ತಿ ಮುದಗಲ್, ರಾಮಚಂದ್ರ ಸಗರ, ಅಶೋಕ ಘನಾತೆ, ಶರಣು ಪಾಟೀಲ ಮಾತನಾಡಿ, ಸರ್ಕಾರವು ಕನ್ನಡ ಶಾಲೆಗಳ ಬಗ್ಗೆ ತಳೆದಿರುವ ತಾತ್ಸರ ಭಾವನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಹಸೀಲ್ದಾರ್ ಉಮಾಕಾಂತ ಹಳ್ಳೆಯವರಿಗೆ ಮನವಿಪತ್ರ ಸಲ್ಲಿಸಿದರು.

ಈ ವೇಳೆ ಕೃಪಾ ಸಂಘಟನೆಯ ಹೊನ್ನಪ್ಪ ಗಂಗನಾಳ, ಖಾಸಗಿ ಶಾಲೆಗಳ ವಿ.ಸತ್ಯಂ ರೆಡ್ಡಿ, ಗುರು ಗೋಗಿ, ಮೃತ್ಯುಂಜಯ ಚಿಕ್ಕಮಠ, ಗುರುಲಿಂಗಯ್ಯ ಸ್ವಾಮಿ, ಪ್ರವೀಣ ಫಿರಂಗಿ, ಚಂದ್ರಶೇಖರ ಹೊಸ್ಮನಿ, ಮೃತ್ಯುಂಜಯ ಗೋಗಿ, ಶಿವಶರಣಪ್ಪ ಪತ್ರಿ, ಚನ್ನಯ್ಯಸ್ವಾಮಿ, ಶಶಿಮಾನು, ಮನೋಹರ, ವಿಜಯ ಕುಮಾರ, ನಾರಾಯಣಾಚಾರ್ಯ ಸಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net