ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿ ಮಾಡಿ

1407KLb01
ಕನ್ನಡ ಶಾಲೆ ಉಳಿಸಿ, ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಅರುಣಕುಮಾರ ಪೋಚಾಲ್, ಚನ್ನಬಸಪ್ಪ ಗಾರಂಪಳ್ಳಿ, ಅನಿಲಕುಮಾರ ಡಾಂಗೆ, ನಾಗರತ್ನಾ, ಸಿ.ಎಸ್.ಮಾಲಿಪಾಟೀಲ್, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಶಿವರಾಜ ಅಂಡಗಿ, ಪ್ರಭವ ಪಟ್ಟಣಕರ್, ಮಲ್ಲಿಕಾರ್ಜುನ ಸಾರವಾಡ ಇತರರಿದ್ದರು.
Published on

ಕಲಬುರಗಿ: ಕನ್ನಡ ಶಾಲೆಗಳ ರಕ್ಷಣೆ, ಶಾಲೆಗಳಿಗೆ ವಿಧಿಸಿದ ಷರತ್ತು ಸಡಿಲೀಕರಣಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿಪರೀತ ಕಠಿಣ ನಿಯಮಗಳಿಂದಾಗಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ಮಾತೃ ಭಾಷೆ ಕನ್ನಡ ಉಳಿಯಲು ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು. ಸರ್ಕಾರದ ಕಡೆಗಣನೆಯಿಂದ ಪ್ರತಿ ವರ್ಷ ಸಾವಿವಾರು ಶಾಲೆಗಳು ಬಂದ್ ಆಗುತ್ತಿವೆ. ಇದೊಂದು ಚಿಂತಾಜನಕ ಸಂಗತಿ. ಶಾಲೆ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಕನ್ನಡ ಶಾಲೆ ಉಳಿಸಿ, ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿ ಉಳಿಸಲು ಸರ್ಕಾರ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು. ೧೯೫೫ರ ನಂತರ ಪ್ರಾರಂಭವಾದ ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನ ಒದಗಿಸಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸಬೇಕು, ಬಡ ಮಕ್ಕಳಿಗೆ ದಾರಿದೀಪವಾಗಿದ್ದ ಆರ್‌ಟಿಈ ಪ್ರವೇಶ ಖಾಸಗಿ ಶಾಲೆಗಳಿಗೆ ಮರು ಜಾರಿ ಮಾಡಬೇಕು, ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು, ೩೭೧(ಜೆ) ಅಡಿ ದೊರೆಯಬೇಕಾದ ಎಲ್ಲ ಸೌಲಭ್ಯ ಖಾಸಗಿ ಅನುದಾನರಹಿತ ಶಾಲೆಗಳಿಗೂ ನೀಡಬೇಕು, ರಾಜ್ಯವ್ಯಾಪಿ ಅನಧಿಕೃತ ಕೋಚಿಂಗ್ ಸೆಂಟರ್ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.

ಕನ್ನಡ ಶಾಲೆ ಬಂದ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ) ಪ್ರಾರಂಭಿಸುವುದನ್ನು ಕೈಬಿಡಬೇಕು, ಕನ್ನಡ ಶಾಲೆ ಪ್ರಾರಂಭಿಸಲು ಅಗತ್ಯ ಷರತ್ತು ಸರಳೀಕರಣಗೊಳಿಸಬೇಕು, ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆಗಳ ಹೆಸರಿನ ನಾನ್ ಎನ್‌ಎ ಇದ್ದ ಆಸ್ತಿ ಉಚಿತವಾಗಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ನೋಂದಾಯಿಸಿ ಹಕ್ಕುಪತ್ರ ಈ ಸ್ವತ್ತು ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಒಕ್ಕೂಟದ ಕಕ ಅಧ್ಯಕ್ಷ ಸುನಿಲ್ ಹುಡುಗಿ, ಕಾರ್ಯದರ್ಶಿ ಅರುಣಕುಮಾರ ಪೋಚಾಲ್, ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಗಾರಂಪಳ್ಳಿ, ಜಿಲ್ಲಾಧ್ಯಕ್ಷ ಅನಿಲಕುಮಾರ ಡಾಂಗೆ, ಪ್ರಮುಖರಾದ ನಾಗರತ್ನ ನಂದ್ಯಾಳ್, ಸಿ.ಎಸ್.ಮಾಲಿಪಾಟೀಲ್, ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಪ್ರಭವ ಪಟ್ಟಣಕರ್, ಮಲ್ಲಿಕಾರ್ಜುನ ಸಾರವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net