ಕನ್ನಡ ಶಾಲೆ ಮುಚ್ಚದಂತೆ ಕಾಪಾಡಲಿ

23UK2
Published on

ಉಳ್ಳಾಗಡ್ಡಿ-ಖಾನಾಪುರ: ಗಡಿ ಭಾಗದಲ್ಲಿ ಕನ್ನಡ ಸ್ಥಿತಿ ಹದಗೆಟ್ಟಿದ್ದು, ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕಿದೆ. ಕನ್ನಡ ಭಾಷೆಗೆ ಸೀಮಿತವಾಗದೇ ಬದುಕು ಕಟ್ಟಿ ಕೊಡುವಂತಾಗಬೇಕು ಎಂದು ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಯಮಕನಮರಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಕ್ಕೇರಿ ತಾಲೂಕು 12ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ವಲಯದಲ್ಲಿ ಮೂರು ಕಾರ್ಖಾನೆ, ಇಂಜಿನಿಯರಿಂಗ್ ಕಾಲೇಜುಗಳಿದ್ದರೂ ತಾಲೂಕಿಗೆ ಹಲವಾರು ಅಗತ್ಯತೆಗಳಿವೆ. ತಾಲೂಕಾಧ್ಯಕ್ಷರು ಅವುಗಳನ್ನು ಸಮ್ಮತಿಸಿ ಜಾರಿ ತರಬೇಕು. ಶ್ರೀಮಠದಿಂದ ಗಡಿಭಾಗದಲ್ಲಿರುವ ಕನ್ನಡ ಸಮಸ್ಯೆಗಳ ಕುರಿತು ಉಪನ್ಯಾಸ ಹಾಗೂ ಅಧ್ಯಯನ ಮಾಡಲು ದತ್ತಿ ಉಪನ್ಯಾಸಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು. ಬೆಳಗಾವಿಯಲ್ಲಿ ಭಾಷಾ ವಿಷಯಕ್ಕೆ ನಡೆದ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಕನ್ನಡಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಚಿಂತನೆಗಳಿಂದ ಗಡಿನಾಡಿನಲ್ಲಿ ಕನ್ನಡ ಗಟ್ಟಿಗೊಳಿಸಬೇಕು. ಇಂದು ಸಾಹಿತ್ಯ ಸಂಘಟನೆಯ ಅಗತ್ಯವಿದೆ. ಮಹಾರಾಷ್ಟ್ರದ ಮುತ್ನಾಳ ಹಳ್ಳಿಯಲ್ಲಿ 11 ವರ್ಷಗಳಿಂದ ಕನ್ನಡದಲ್ಲೆ ಕಾರ್ಯಕ್ರಮ ನಡೆಯುತ್ತಿದೆ. 200ಕ್ಕೂ ಹೆಚ್ಚು ಜನ ಸ್ಮಶಾನದಲ್ಲಿ ಕುಳಿತು ಇಂದಿಗೂ ಪ್ರವಚನ ಕೇಳುತ್ತಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡದ ಗಟ್ಟಿತನ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಮ್ಮಾರ ಅವರು ಹುಕ್ಕೇರಿ ತಾಲೂಕಿನ ಹೆಮ್ಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಣಸಿಕೊಳ್ಳಮಠದ ಶ್ರೀ ರಾಚೋಟಿ ಸ್ವಾಮೀಜಿ, ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಹತ್ತರಗಿ ಹರಿ ಮಂದಿರದ ಡಾ. ಆನಂದ ಮಹಾರಾಜ ಗೋಸಾವಿ, ಯಮಕನಮರಡಿಯ ಸಿದ್ದಬಸವ ದೇವರು, ಸಾಹಿತಿ ಎಲ್.ವಿ.ಪಾಟೀಲ, ಕಸಾಪ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ, ನಿಕಟಪೂರ್ವ ಸರ್ವಾಧ್ಯಕ್ಷ ಮಹಾವೀರ ಬಾಳಿಕಾಯಿ, ತಾಲೂಕು ದಂಡಾಧಿಕಾರಿ ಮಂಜುಳಾ ನಾಯಿಕ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಕಿರಣ ರಜಪೂತ, ರವಿಂದ್ರ ಜಿಂಡ್ರಾಳಿ, ಡಾ. ಗುರುದೇವಿ ಹುಲ್ಲೆಪ್ಪನವರಮಠ, ನಿವೃತ್ತ ಯೋಧ ಬಸವರಾಜ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net