

ಚಿತ್ರದುರ್ಗ: ಜಿಲ್ಲಾಡಳಿತ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ, ಅಧ್ಯಕ್ಷತೆ ವಹಿಸಬೇಕಿದ್ದ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಗೈರಾಗಿದ್ದರು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ‘ಅವರಿಗೆ ಜ್ವರ, ತಲೆನೋವಿದೆ. ಅನಾರೋಗ್ಯದಿಂದಾಗಿ ಹಾಜರಾಗಿಲ್ಲ. ಶಾಸಕರು ಗೋವಾದಲ್ಲಿದ್ದಾರೆ ಎಂಬುದು ನಿಮ್ಮ ಅನುಮಾನವೇ? ಅವರು ಚಳ್ಳಕೆರೆಯಲ್ಲಿ ಇದ್ದಾರೆ’ ಎಂದರು.
ದೇಶದಲ್ಲೇ ಇನ್ನೊಂದು ಪಾಕಿಸ್ತಾನ ನಿರ್ಮಾಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯ ತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಯತ್ನಾಳ್ ಅವರ ಪಾರ್ಟಿಯಲ್ಲೇ ವಿಲನ್ ಆಗಿದ್ದಾರೆ. ಶಕ್ತಿ ಸೇರಿದಂತೆ ಯಾವುದೇ ಗ್ಯಾರಂಟಿಗಳು ಸ್ಥಗಿತಗೊಳ್ಳುವುದಿಲ್ಲ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲೂ ಗೆಲ್ಲುತ್ತೇವೆ. ಹಿರಿಯೂರು ವಿವಿ ಸಾಗರ ಕೋಡಿ ಬದಲಾವಣೆಯ ಯಾವುದೇ ಪ್ರಸ್ತಾಪವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಡ್ಯಾಮ್ ಕಟ್ಟಿದ ಸಂದರ್ಭದಲ್ಲೇ ಭೂ ಸ್ವಾಧೀನ, ಬಫರ್ ಜೋನ್ ನಿಗದಿ ಆಗಿರುತ್ತದೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು. ಹಿನ್ನೀರು ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರ ಜಮೀನಿಗೆ ಸಾಗುವಳಿ ಚೀಟಿಗೆ ಬೇಡಿಕೆ ಇದೆ. ಜಿಲ್ಲೆ, ತಾಲೂಕು ಗಡಿ ಪೂರ್ವ ನಿಗದಿತವಾಗಿದೆ ಎಂದರು.
ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್ ಇದ್ದರು.
...