ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ ವಹಿಸಿ

ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ ವಹಿಸಿ
Published on

ಹಾಸನ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ನ.1 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಸೂಚಿಸಿದರಲ್ಲದೆ, ಯಾವುದೇ ಲೋಪವಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲು ತಾಲೀಮು ನಡೆಸುವಂತೆ ಸೂಚಿಸಿದರಲ್ಲದೆ, ಸರ್ಕಾರಿ ಶಾಲೆಗಳ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂದ ರಚಿಸಿರುವ ಉಪ ಸಮಿತಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಎಲ್ಲಾ ಸರ್ಕಾರಿ ಕಚೇರಿಗಳ ಒಳ ಮತ್ತು ಹೊರ ಆವರಣಗಳ ಸ್ವಚ್ಚತೆಗೆ ಕ್ರಮವಹಿಸುವುದರ ಜೊತೆಗೆ ಕಟ್ಟಡಗಳ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಿದರು.
ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ನಮ್ಮ ಹೆಮ್ಮೆಯ ಕವಿಗಳು ರಚಿಸಿರುವ ಗೀತೆಗಳನ್ನು ಸಾರ್ವಜನಿಕರು,ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಕಲಾವಿದರು ಎರಡು ನಿಮಿಷಗಳ ಕಾಲ ಹಾಡಿ ರೆಕಾಡಿರ್ಂಗ್ ಮಾಡಿಕೊಂಡು ವಾಟ್ಸ್ ಆ್ಯಪ್ ನಂಬರ್ 7022434222 ಗೆ ಕಳುಹಿಸುವಂತೆ ತಿಳಿಸಿದರು. ಅತ್ಯುತ್ತಮವಾಗಿ ಹಾಡಿರುವ ತಂಡ ಮತ್ತು ವ್ಯಕ್ತಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕು ಸೆಲ್ಫಿ ಸ್ಟ್ಯಾಂಡ್ ಹಾಕಬೇಕು.ಮನೆ ಮನೆಗಳಲ್ಲಿ ಕನ್ನಡದ ಬಾವುಟ ಹಾರಿಸಲು ಕ್ರಮವಹಿಸಕು. ಹಾಸನಾಂಬ ಕಲಾ ಕ್ಷೇತ್ರದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆಗೆ ಕ್ರಮವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದರ ಜೊತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಕನ್ನಡ ಹಾಡುಗಳನ್ನು ಹಾಡಿ ವಾಟ್ಸ್ ಆ್ಯಪ್ ನಂಬರ್ 7022434222 ಗೆ ಕಳುಹಿಸುವಂತೆ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಂದ ಸಮೂಹ ಗಾಯನ ಏರ್ಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.ಕನ್ನಡ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್,ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net