

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣಕ್ಕೆ ಬುಧವಾರ ಆಗಮಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಶಾಸಕರು, ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆ ಮುಖಂಡರು ಭವ್ಯ ಸ್ವಾಗತ ಕೋರಿದರು.
ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ಪ್ರತಿಷ್ಠಾಪಿಸಿದ್ದ ಕನ್ನಡಾಂಬೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪುಷ್ಪಮಾಲೆ ಹಾಕಿ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದೆಲ್ಲೆಡೆ ಸಂಚಾರ ಮಾಡುತ್ತಿರುವ ಕನ್ನಡ ರಥಯಾತ್ರೆಯು ಕನ್ನಡಿಗರಲ್ಲಿ ನಾಡು, ನುಡಿ ಜಾಗೃತಿ ಮೂಡಿಸುತ್ತಿದೆ. ನಾಳೆ ಕೊಳ್ಳೇಗಾಲದಿಂದ ರಾಜ್ಯದ ವಿವಿಧೆಡೆ ಸಂಚರಿಸಲು ಅದ್ಧೂರಿಯಾಗಿ ಬೀಳ್ಗೊಡುಗೆ ನೀಡಲಾಗುವುದು ಎಂದರು.
ಬಳಿಕ ರಥಯಾತ್ರೆ ಪಟ್ಟಣದ ತಾಲೂಕು ಕಚೇರಿ ಮುಂಭಾಗದಿಂದ ಅಂಬೇಡ್ಕರ್ ವೃತ್ತ, ಎ.ಡಿ.ಬಿ. ಸರ್ಕಲ್ ಮೂಲಕ ತೆರಳಿ ಪ್ರವಾಸಿ ಮಂದಿರದೊಳಗೆ ತೆರಳಿತು. ತಹಸೀಲ್ದಾರ್ ಬಸವರಾಜು, ನಗರಸಭೆ ಪೌರಯುಕ್ತ ರಮೇಶ್, ಸಿಡಿಪಿಒ ನಂಜಮ್ಮಣಿ, ನಗರಸಭೆ ಅಧ್ಯಕ್ಷ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಸಾಪ ಅಧ್ಯಕ್ಷ ನಾಗರಾಜು ಮತ್ತಿತರಿದ್ದರು.