

ಕೊಳ್ಳೇಗಾಲ: ಕನ್ನಡ ರಕ್ಷಣೆಗಾಗಿ ಯಾವುದೇ ಸಂದರ್ಭದಲ್ಲೂ ಸಿದ್ಧರಾಗಿರಬೇಕು ಎಂದು ಕರುನಾಡ ವಿಜಯಸೇನೆ ಸಂಸ್ಥಾಪಕ, ಅಧ್ಯಕ್ಷ ಎಚ್.ಎನ್.ದೀಪಕ್ ಸೇನೆಯ ಪದಾಧಿಕಾರಿಗಳಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರುನಾಡ ವಿಜಯಸೇನೆಯ ಚಾಮರಾಜನಗರ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದೂವರೆ ವರ್ಷಗಳಿಂದಲೂ ವಿಜಯಸೇನೆ ರಾಜ್ಯದಲ್ಲಿ ಕನ್ನಡ ಪರವಾಗಿ ಅನೇಕ ಹೋರಾಟಗಳನ್ನು ರೂಪಿಸುತ್ತ ನಾಡು, ನೆಲ, ಜಲ ಭಾಷೆ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರೊನಾ ಸಂಧರ್ಭದಲ್ಲಿ ಜನರ ಸಂಕಷ್ಟಕ್ಕೀಡಾಗಿದ್ದಾಗ ರಾಜ್ಯಾದ್ಯಂತ ಸುಮಾರು 5 ಸಾವಿರ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಸರ್ಕಾರಿ ಶಾಲೆಯ ಉಳಿವಿಗಾಗಿ ರಾಜ್ಯದೆಲ್ಲೆಡೆ ಸುಮಾರು 500 ಸರ್ಕಾರಿ ಶಾಲೆಗಳಿಗೆ ಬಣ್ಣ ತುಂಬಿಸುವ ಕೆಲಸ ಮಾಡಿದ್ದೇವೆ ಎಂದರು.
ಬಂಡಳ್ಳಿ ಮಠದ ಪೀಠಾಧ್ಯಕ್ಷ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ, ಚಿಕ್ಕಿಂದುವಾಡಿ ಪೀಠದ ಮಠದ ಶ್ರೀ ಬಾಲಷಡಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ, ಬೆಂಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎ.ರುದ್ರೇಶ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್, ಸಂಘಟನೆಯ ರಾಜ್ಯ ಯುವ ಘಟದ ಅಧ್ಯಕ್ಷ ಮಹೇಶ್, ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ ಮತ್ತಿತರಿದ್ದರು.