

ಕಮಲನಗರ: ಶತ-ಶತಮಾನಗಳಿಂದ ಕನ್ನಡ ಮನಸ್ಸುಗಳು ಒಂದೇ ವೇದಿಕೆಯಡಿ ಬರಬೇಕೆಂಬ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎನ್.ಶಿವಣಕರ ಹೇಳಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ವಾಚನಾಲಯದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ವರ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು-ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಪಾತ್ರವನ್ನು ಶತಮಾನಗಳಿಂದ ನಿರ್ವಹಿಸಿದೆ. ಕಸಾಪ ಉಳಿವಿಗಾಗಿ ಎಲ್ಲ ಕನ್ನಡಿಗರು ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಮಾತನಾಡಿ, ಕನ್ನಡಿಗರು ಒಂದೆಡೆ ಸೇರಲು ವೇದಿಕೆಯೇ ಇಲ್ಲದ ದಿನಗಳಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್, ದಿವಾನ್ ಸರ್.ಎಂ. ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಮಹನೀಯರ ಸತತ ಪರಿಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಬಾಲಾಜಿ ತೇಲಂಗ್, ಕಸಾಪ ಉಪಾಧ್ಯಕ್ಷ ಧನರಾಜ ಭವರಾ, ಸುಭಾಷ ಘಾಟೆ, ಉಮಾಕಾಂತ ಬಚ್ಚಣ್ಣ, ಸಂತೋಷ ಸುಲಾಕೆ, ಮಹೇಶ ಪಾಟೀಲ್, ಪ್ರಶಾಂತ ಖಾನಾಪುರೆ, ಮಹೇಶ ಸಜ್ಜನ್, ಶರಣು ಚಾಂಡೇಶ್ವರೆ, ಶಿವರಾಜ ಪಾಟೀಲ್ ಇತರರಿದ್ದರು. ಯಶವಂತ ಬಿರಾದಾರ ಸ್ವಾಗತಿಸಿದರು. ಮಹಾದೇವ ಮಡಿವಾಳ ನಿರೂಪಣೆ ಮಾಡಿದರು.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ನಾಡು-ನುಡಿ, ಸಾಹಿತ್ಯ, ಕನ್ನಡ ಆಸ್ಮಿತೆ ರಕ್ಷಣೆಗೆ ರಚನಾತ್ಮಕ ಕಾರ್ಯ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ.
| ಭಾವುರಾವ ಹೇಡೆ, ನಿವೃತ್ತ ಮುಖ್ಯಗುರು