

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಕವಿಯ ಭಾವನೆಗಳು ಓದುಗರ ಮನಸು, ಹೃದಯಕ್ಕೆ ತಟ್ಟಬೇಕಾದರೆ ಅದು ಕನ್ನಡ ಭಾಷಾ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಂಗ್ಲ ಭಾಷಾ ಕೃತಿಗಳು ಓದುಗನ ಮನಸ್ಸಿಗೆ ಕ್ಷಣಿಕ ಖುಷಿಯನ್ನಷ್ಟೇ ಉಂಟು ಮಾಡುತ್ತವೆ. ಆದರೆ ಕನ್ನಡ ಭಾಷೆಯಲ್ಲಿ ಜೀವ ಸೆಲೆಯಿದೆ ಎಂದು ಹೇಳಿದರು.
ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಕನ್ನಡ ಪುಸ್ತಕಗಳನ್ನು ಹೆಚ್ಚು ಓದಬೇಕು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ಪ್ರತಿಭಾವಂತ ಸಾಹಿತಿಗಳು ಹಲವರಿದ್ದಾರೆ. ಅವರೆಲ್ಲರಿಗೂ ಸರಿಯಾದ ವೇದಿಕೆ ಸಿಗಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲೆ ಮುಖ್ಯಸ್ಥ ಎಸ್.ಡಿ.ಪ್ರಶಾಂತ್ ಮಾತನಾಡಿದರು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ನಿವೃತ್ತರಾದ ಶಿಕ್ಷಕಿಯರಾದ ಮಮತಾ, ಪುಷ್ಪವೇಣಿ, ಕಚೇರಿ ಸಿಬ್ಬಂದಿ ಲೀಲಾವತಿ, ಚೆನ್ನಪ್ಪ ಅವರನ್ನು ಸನ್ಮಾನ ಮಾಡಲಾಯಿತು. ಕಳೆದ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ರಾಜ್ಯದಲ್ಲಿ 8ನೇ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಹರ್ಷಿತಾ ಅವರನ್ನು ಗೌರವಿಸಲಾಯಿತು.
ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ಕಾರ್ಯದರ್ಶಿಗಳಾದ ಪೆಮ್ಮಾಡಿಯಂಡ ವೇಣುಅಪ್ಪಣ್ಣ, ನಿರ್ದೇಶಕರಾದ ತೇಲಪಂಡ ಶೈಲ, ಪಳಂಗಂಡ ವಿಠಲ್ ಪೂವಯ್ಯ, ಈರಮಂಡ ಸೋಮಣ್ಣ, ಮೂಡೇರ ಕಾಳಯ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರಶ್ಮಿ, ಪದವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವಿಲ್ಮಾ ಇದ್ದರು.