

ಸೊರಬ: ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಬಳಕೆ ಕಡಿಮೆಯಾಗುತ್ತಿದೆ ಎನ್ನುವ ಬದಲು ಕನ್ನಡ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದು ಸಾಹಿತಿ ಡಾ. ಪಿ.ಶಾಂತರಾಮಪ್ರಭು ನಿಟ್ಟೂರು ಅಭಿಪ್ರಾಯಪಟ್ಟರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ದುಸ್ಥಿತಿಗೆ ನಾವೇ ಕಾರಣರಾಗುತ್ತಿದ್ದು, ಭಾಷೆ ಶ್ರೇಷ್ಠತೆ ಬಗ್ಗೆ ಅರಿವಿಲ್ಲ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ ಕಡಿಮೆಯಾಗಿದೆ. ಸರ್ಕಾರದ ಸಂಬಳ ಪಡೆಯುವ ಅವರು ವೃತ್ತಿಗೆ ಯಾವ ನ್ಯಾಯ ನೀಡುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. 12ನೇ ಶತಮಾನದಲ್ಲೇ ವಚನಕಾರರು ಕನ್ನಡ ಭಾಷೆಗೆ ಪ್ರಾಮುಖ್ಯ ನೀಡಿದ್ದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪ್ರಾಮುಖ್ಯತೆ ಸಿಗಬೇಕು. ಭಾಷೆ ಪ್ರೀತಿಸದೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು.
ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ವೌಖಿಕ ಪರಂಪರೆ ಮತ್ತು ಅಕ್ಷರಸ್ಥ ಸಮುದಾಯದಲ್ಲಿ ರೂಪುಗೊಂಡ ಕಾವ್ಯ ಜನ ಸಮುದಾಯವನ್ನು ಎಚ್ಚರದಲ್ಲಿಡುವ ಕೆಲಸವನ್ನು ನಿರಂತರವಾಗಿ ಮಾಡಿದೆ ಎಂದು ಹೇಳಿದರು.
ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರವಿ ಕಲ್ಲಂಬಿ ಕಾವ್ಯಗಳ ಕುರಿತು ವಿಶ್ಲೇಷಿಸಿದರು. ಅನೇಕರು ಸ್ವರಚಿತ ಕವನಗಳನ್ನು ವಾಚಿಸಿದರು. ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ, ಬ್ರಹ್ಮಕುಮಾರಿ ವೀಣಾಕ್ಕ, ರೂಪಾ ಶ್ರೀನಾಥ್, ಪ್ರಿಯಾ ಕುಮಾರಸ್ವಾಮಿ, ಸಂಗೀತಾ, ಸುನೀತಾ ಇತರರಿದ್ದರು.
ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡದ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಬೇಸರದ ಸಂಗತಿ. ಕೆಲವರಲ್ಲಿ ಭಾಷೆ ಬಗ್ಗೆ ಒಲವಿಲ್ಲ. ಬಹುಪಾಲು ಜನರಿಗೆ ಕನ್ನಡದ ಪರಂಪರೆ, ಪ್ರಾಚೀನ ಕಾವ್ಯ, ಶಾಸನ ಗೊತ್ತಿಲ್ಲ. ಬೆಂಗಳೂರಿನ ಜನರಿಗೆ ಕನ್ನಡವೇ ಮರೆತು ಹೋಗಿದೆ.
ಡಾ. ಪಿ.ಶಾಂತರಾಮಪ್ರಭು ನಿಟ್ಟೂರು, ಸಾಹಿತಿ
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಸಾಹಿತ್ಯದ ಬಗ್ಗೆ ಒಲವು ತೋರಿಸುತ್ತಿಲ್ಲ. ವ್ಯಕ್ತಿಯ ವ್ಯಕ್ತಿತ್ವ ಬದಲಾಗುವುದು ಸಾಹಿತ್ಯದಿಂದ ಮಾತ್ರ. ಕನ್ನಡ ಭಾಷೆಗೆ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಗೌರವವಿದೆ.
ಶಂಕರ ಶೇಟ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ