

ಹಾಸನ: ಕನ್ನಡ ನಾಡು ಫಲವತ್ತಾಗಿಯೇ ಇದೆ. ಇಲ್ಲಿ ವಾಸ ಮಾಡುವ ಕನ್ನಡಿಗರು ಸರಳ ಹಾಗೂ ಯಾರೇ ಬಂದರೂ ಪ್ರೀತಿಸೋ ಹೃದಯ ಇರುವಂತವರು. ಪ್ರಪಂಚದ ಕೆಲ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಪ್ರಾಚೀನವಾಗಿದೆ. ಇದರಿಂದಲೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಎಂದರು.
ನಗರದ ಕುವೆಂಪು ರಸ್ತೆ ಬಳಿ ಇರುವ ಜಿಲ್ಲಾ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಲಯನ್ಸ್ ಕ್ಲಬ್ ನಿರ್ದೇಶಕರೂ ಆಗಿರುವ ಅವರು, ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ, ಜಗತ್ತಿನಲ್ಲಿ ನಿಜವಾದ ವಿದ್ವಾಂಸರು ಇರುವುದು ಕನ್ನಡ ಭಾಷೆಯಲ್ಲಿ ಮಾತ್ರ ಎಂದು ತಿಳಿಸಿದರು.
ಪ್ರಪಂಚದಲ್ಲಿ ಹೆಚ್ಚು ಕೃತಿ ರಚನೆ ಆಗುತ್ತಿರುವುದು ಕನ್ನಡ ಭಾಷೆಯಲ್ಲಿ. ನಾಡಿನಲ್ಲಿ ಅಷ್ಟೊಂದು ಜನ ಲೇಖಕರು ಜೀವಂತವಾಗಿದೆ. ಪ್ರಪಂಚದಲ್ಲಿ ಸಾಹಿತಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ. ಆದರೇ ಕನ್ನಡದಲ್ಲಿ ಪಂಪನಿಂದ ಹಿಡಿದು ಕುವೆಂಪು ವರೆಗೂ ನೂರಾರು ಕವಿಗಳು ಸಿಗುತ್ತಾರೆ ಎಂದರು.
ವಿಶ್ವ ದರ್ಜೆಯ ಲೇಖಕನಾಗಿ ಕನ್ನಡದಲ್ಲಿ ಮಾತ್ರ ಸಿಗುತ್ತಾರೆ. ಮಹಾಕಾವ್ಯ ಬರೆದವರಿದ್ದರೆ ಅದು ಕುವೆಂಪು ಮಾತ್ರ. ಕವಿಗಳು ಸುಮ್ಮನೆ ಜನ್ಮತಾಳಲ್ಲ. ಅದು ಮಣ್ಣಿನ ಗುಣ. ಜಗತ್ತಿನಲ್ಲಿ ನಿಜವಾಗಲೂ ವಿದ್ವಾಂಸರು ಇದ್ದರೆ ಕನ್ನಡದಲ್ಲಿ ಮಾತ್ರ ಎಂದು ಹೇಳಿದರು. ಜಗತ್ತಿನಲ್ಲಿ ಲಿಪಿ ಹೊಂದಿರುವ ಐದು ಭಾಷೆಯಲ್ಲಿ ಕನ್ನಡವೂ ಒಂದು. ಯಾವ ಭಾಷೆಯೂ ಇಷ್ಟೊಂದು ಪದ ಸಂಪತ್ತು ಹೊಂದಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಮಾತ್ರ. ಕನ್ನಡ ಎಂದರೆ ಸುಂದರ ಭಾಷೆ ಮಾತನಾಡಲು ಅಭಿಮಾನಪಡಬೇಕು ಎಂದು ಹೇಳಿದರು.
ಯಾವತ್ತಿಗೂ ಹಿಂಜರಿಯಬಾರದು ಎಂದು ಕನ್ನಡ ನಾಡಿನ ಕವಿಗಳನ್ನು ನೆನೆಪಿಸಿಕೊಂಡರು. ಇದೇ ವೇಳೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಾಸನ ಲಯನ್ಸ್ ಕ್ಲಬ್ ಹಾಗೂ ಶಾಖೆಯ ಸದಸ್ಯರು ಪ್ರಥಮ ಸ್ಥಾನಗಳಿಸಿ ಕಪ್ ತಂದ ಹಿನ್ನೆಲೆ ಕ್ರೀಡಾಪಟುಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್, ಖಜಾಂಚಿ ಬಿ.ಎಂ. ರವಿಕುಮಾರ್, ಲಿಯೋ ಕ್ಲಬ್‌ನ ಸುಪ್ರಿತಾ, ನೂತನ್, ಕಾರ್ಯದರ್ಶಿ ಸುವರ್ಚಲಾ, ಎಚ್.ಪಿ. ಅಶೋಕ್ ಕುಮಾರ್, ಎಸ್.ಪಿ. ಪ್ರಕಾಶ್, ಹೆಚ್.ಆರ್. ಚಂದ್ರೇಗೌಡ ಇದ್ದರು.