

ಕೊಳ್ಳೇಗಾಲ: ಕನ್ನಡ ಭಾಷೆಯು ನಿಂತ ನೀರಾಗದೆ, ಹರಿಯುವ ನದಿಯಂತಾಗಬೇಕು ಎಂದು ಸಂತ ಅಸ್ಸಿಸ್ಸಿ ಚರ್ಚ್‌ನ ಫಾದರ್ ಎಂ.ರಾಯಪ್ಪ ತಿಳಿಸಿದರು.
ಪಟ್ಟಣದ ಸಂತ ಅಸ್ಸಿಸ್ಸಿ ಪ್ರೌಢಶಾಲೆಯಲ್ಲಿ ಬುಧವಾರ ಜೆಎಸ್‌ಬಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕನ್ನಡ ಮಾಸಾಚರಣೆ 2024 ಸಮಾರಂಭವನ್ನು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕನ್ನಡ ಭಾಷೆಯು ಹರಿಯುವ ನದಿಯಂತಾಗಬೇಕು. ನದಿ ಹರಿದಂತೆಲ್ಲ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸುತ್ತದೆ. ಹಾಗೆಯೇ ಕನ್ನಡ ಭಾಷೆಯು ಸಹ. ಅದು ಹರಿದಂತೆಲ್ಲ ಕನ್ನಡದ ಕಂಪನ್ನು ಬೀರುತ್ತದೆ ಮತ್ತು ಹರಡುತ್ತದೆ ಎಂದು ಬಣ್ಣಿಸಿದರು.
ಕನ್ನಡ ನಾಡು, ನುಡಿ, ಭೂಮಿ, ಹೊನ್ನು, ಸಂಸ್ಕೃತಿ ಎಲ್ಲವನ್ನೂ ಅನುಭವಿಸುವ ನಾವು ನಿಜವಾದ ಕನ್ನಡಿಗರು, ಕನ್ನಡದ ಮಕ್ಕಳು. ನಾವೆಲ್ಲರೂ ಅದಕ್ಕೆ ಚಿರಋಣಿಯಾಗಿರಬೇಕು ಎಂದರು. ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿದರು. ಶಾಲೆಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನದ ಜತೆೆಗೆ ಶಾಲೆಯ ಎಲ್ಲ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು. ಶಾಲೆಯ ಮುಖ್ಯಶಿಕ್ಷಕ ಎಲ್.ಇಗ್ನಾಸಿ ಮುತ್ತು, ಸುನೀತಾ, ಕಲಾವತಿ, ಚೇತನ, ಸೇಸುರಾಜು, ಜ್ಞಾನ ಪ್ರಕಾಶ, ಜ್ಞಾನ ಸೌಂದರ್ಯ, ಜಾನ್ಸಿ ವಿಕ್ಟೋರಿಯ, ಮರಿ ಸುನೀತಾ, ಶ್ರೀವಿದ್ಯಾ ಇತರರು ಇದ್ದರು.