

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನುಡಿ, ಕನ್ನಡ ಕಾವ್ಯರ್ಷಿಗಳ ಕೈಗನ್ನಡಿ. ಕವಿಕಾವ್ಯ ಸೃಷ್ಟಿಗೆ ಹೊನ್ನುಡಿ. ಕನ್ನಡಿಗರಾದ ನಮಗೆ ಚೈತನ್ಯ ಉಂಟುಮಾಡುವ ಸುಮಧುರವಾಣಿ ಎಂದು ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ‘ಕರ್ನಾಟಕ ಸಂಭ್ರಮ-50’ ನಿಮಿತ್ತ ಶನಿವಾರ ಏರ್ಪಡಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕರ್ನಾಟಕವು ಇಡೀ ಭಾರತದಲ್ಲೇ ವೈಚಾರಿಕ ಕ್ರಾಂತಿ ಮೆರೆದ ನಾಡಾಗಿದೆ. ಕನ್ನಡಿಗರಲ್ಲಿನ ಸಹನೆ, ವಿಶಾಲ ಮನೋಭಾವ ಪ್ರಜಾಕಲ್ಯಾಣದ ಉದಾತ್ತ ಭಾವನೆಗಳೆಲ್ಲ ಕನ್ನಡಿಗರೆಲ್ಲರ ದೈನಂದಿನ ಜೀವನ ಕ್ರಮವಾಗಿದ್ದವು. ಮೂಲತಃ ದ್ರಾವಿಡ ಭಾಷೆಗೆ ಸೇರಿದ ಕನ್ನಡ ಭಾಷೆ ಕನ್ನಡಿಗರಾಡುವ ಕಸ್ತೂರಿ. ಈ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಎಂದೆಂದಿಗೂ ಅಳಿಯಲಾರದ ಭಾಷೆ. ಕನ್ನಡ ಮನರಂಜನೆಗಾಗಿ ಸೃಷ್ಟಿಯಾದುದಲ್ಲ. ಅದು ಜನತೆಯ ಕಲ್ಯಾಣ, ನೀತಿಧರ್ಮ ಸ್ಥಾಪನೆಗಾಗಿ ನಿರ್ಮಿತವಾಗಿದೆ ಎಂದರು.
ಕರ್ನಾಟಕ ಇಡೀ ದೇಶದಲ್ಲೇ ಹಲವು ವಿಚಾರಗಳಲ್ಲಿ ಮುಂಚೂಣಿಯಲ್ಲಿದೆ. ಹಲವು ಪ್ರಥಮಗಳನ್ನು ಸಾಧಿಸಿದ ಕೀರ್ತಿ ಈ ನಾಡಿಗಿದೆ. ಬಹಳ ಹಿಂದಿನ ಕಾಲದಿಂದಲೂ ಕರ್ನಾಟಕವು ಜಾತಿಯ ಸಾಮರಸ್ಯ ಉಳಿಸಿಕೊಂಡು ಬಂದಿದೆ. ಕರ್ನಾಟಕ ಹಲವು ತತ್ವಮತಗಳ ಸಂಗಮವಾಗಿದೆ. ಪರಾಂಪರಾಗತ ಕನ್ನಡ ಕಸ್ತೂರಿಯನ್ನು ಉಳಿಸಿ, ಬೆಳೆಸುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಹಿರೇಮಠ ಮಾತನಾಡಿ, ಕನ್ನಡಿಗರು ಅಭಿಮಾನ ಶೂನ್ಯರಾಗಬಾರದು. ಭಾಷೆ, ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಭಿಮಾನ ಪಡಬೇಕು. ಕನ್ನಡ ಭಾಷೆ ಕೇವಲ ಭಾಷೆ ಅಲ್ಲ, ನಮ್ಮ ಸಂಸ್ಕೃತಿ ಹಾಗೂ ಭಾವನೆಯ ಪ್ರತೀಕವೂ ಆಗಿದೆ ಎಂದರು.
ಸತೀಶ ತುರಮರಿ, ಓಂಕಾರ ಹೆಗಡೆ, ಸುಮಿತ್ರಾ ತುರಾಯಿ, ರೂಪಾ ಬಿ. ಸಿ.. ವಿದ್ಯಾರ್ಥಿಗಳು, ಇತರರು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು.