

ಬೀದರ್: ಗಡಿ ಭಾಗದಲ್ಲಿ ಕನ್ನಡ ಭಾಷೆ ಸಮಸ್ಯೆ ಸಹಜವಾಗಿಯೇ ಇರುವುದರಿಂದ ಪ್ರತಿಯೊಬ್ಬರೂ ತಮ್ಮ ಮನ ಮತ್ತು ಮನೆಯಂಗಳದಲ್ಲಿ ಮೊದಲು ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಅಂದಾಗಲೇ ಮಾತೃಭಾಷೆ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಭಾನುವಾರ ಸಂಜೆ ಗಡಿಯಲ್ಲಿ ಕನ್ನಡದ ಸವಾಲುಗಳು ಕುರಿತ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ನಾನು ಪ್ರಾಧಿಕಾರ ಅಧ್ಯಕ್ಷನಾದ ಬಳಿಕ ಗಡಿ ಭಾಗದ 19 ಜಿಲ್ಲೆಗಳಿಗೆ ಕೋಟ್ಯಂತರ ರೂ.ಅನುದಾನ ನೀಡಿರುವೆ. ಕಲಾವಿದರಿಗಾಗಿ ಸುಮಾರು 400 ಸಂಸ್ಥೆಗಳಿಗೆ 4 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಜಯದೇವಿ ತಾಯಿ ಲಿಗಾಡೆ ಹಾಗೂ ಕಯ್ಯಾರ ಕಿಞಣ್ಣ ರೈ ಪ್ರಶಸ್ತಿ ಸ್ಥಾಪಿಸಿ ಅರ್ಹ ಸಾಧಕರಿಗೆ ನೀಡಲಾಗುತ್ತಿದೆ. ಗಡಿಭಾಗದ ಎಲ್ಲ ಗ್ರಂಥಾಲಯಗಳಿಗೆ ದಿನಪತ್ರಿಕೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಕನರ್ಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಗಡಿ ಶಾಲೆಗಳಲ್ಲಿ ಶೌಚಗೃಹ, ಗ್ರಂಥಾಲಯ, ಆಟದ ಮೈದಾನ, ಕುಡಿಯುವ ನೀರಿನ ಸಮಸ್ಯೆ, ಕನ್ನಡ ಶಿಕ್ಷಕರ ಕೊರತೆ ಇರುವ ಕಾರಣ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಗಡಿ ಭಾಗದ ಶಾಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. 40 ಮಕ್ಕಳಿಗೆ ಒಬ್ಬರಂತೆ ಶಿಕ್ಷಕರ ನೇಮಕ ಮಾಡಬೇಕು. ಮಧ್ಯಪ್ರದೇಶದಂತೆ ತೆಲಂಗಾಣ-ಬೀದರ್ ಗಡಿಯಲ್ಲಿ ಸಾಂಸ್ಕೃತಿಕ ಹಬ್ ನಿಮರ್ಿಸಿ ಕಲಾವಿದರಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಪ್ರಮುಖರಾದ ಗುರುನಾಥ ಭುಟ್ಟೆ, ಅಶೋಕ ಕರಂಜೆ, ಶಿವಕುಮಾರ ಸ್ವಾಮಿ, ಡಾ.ವೈಜಿನಾಥ ಕಮಠಾಣೆ, ಶಂಭುಲಿಂಗ ವಾಲ್ದೊಡ್ಡಿ, ಪ್ರೊ.ಎಸ್.ಬಿ. ಬಿರಾದಾರ, ಮಲ್ಲಮ್ಮ ಸಂತಾಜಿ, ರಾಮಕೃಷ್ಣನ್ ಸಾಳೆ, ಡಾ.ಸುನೀತಾ ಕೂಡ್ಲಿಕರ್, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಧನರಾಜ ಆನೆಕಲೆ, ಎಂ.ಜಿ. ದೇಶಪಾಂಡೆ, ಎಸ್.ವಿ. ಕಲ್ಮಠ, ಓಂಪ್ರಕಾಶ ಧಡ್ಡೆ ಇತರರಿದ್ದರು.
ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿದರು. ಮಹಾರುದ್ರ ಡಾಕುಳಗೆ ವಂದಿಸಿದರು. ನಂತರ ಸಾಹಿತಿಗಳು, ಶಿಕ್ಷಕರು, ಗಣ್ಯರೊಂದಿಗೆ ಡಾ.ಸಿ. ಸೋಮಶೇಖರ ಸಂವಾದ ನಡೆಸಿದರು.