ಕನ್ನಡ ಭಾಷೆ ಬಗ್ಗೆ ಕನ್ನಡಿಗರಿಗೆ ವೈಜ್ಞಾನಿಕ ಬದ್ಧತೆ ಇಲ್ಲ

17
Published on


ಮೈಸೂರು: ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಿಗೆ ಭಾವನಾತ್ಮಕ ಸಂಬಂಧವಿದೆಯೇ ಹೊರತು, ವೈಜ್ಞಾನಿಕ ಬದ್ಧತೆ ಇಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.

ನಗರದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದ ಯಾವುದೇ ದೇಶದಲ್ಲಿ ಒಂದು ಭಾಷೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಹಬ್ಬವಾಗಿ ಆಚರಿಸುವುದಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ಭಾಷೆ ತನ್ನ ಹಿರಿಮೆ ಹೊಂದಿದೆ. ಆದರೆ ಕನ್ನಡ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಕನ್ನಡಿಗರೇ ಒಪ್ಪಿಕೊಂಡಿಲ್ಲ ಎಂದರು.

ಕಲಿಕೆಯ ಉದ್ದೇಶದಿಂದ ಇಂಗ್ಲಿಷ್ ಒಳಗೊಂಡಂತೆ ಪ್ರಪಂಚದ ಯಾವುದೇ ಭಾಷೆಯಾದರೂ ನಾವು ಗೌರವಿಸಬೇಕು. ಅದರಂತೆ ನೆಲದ ಭಾಷೆಯಲ್ಲೂ ಬದುಕು ರೂಪಿಸಿಕೊಳ್ಳುವಂತಹ ಅವಕಾಶ ಸೃಷ್ಟಿಯಾಗಬೇಕು. ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 100ಕ್ಕೆ 98 ಅಂಕ ಗಳಿಸುತ್ತಾರೆ. ಆದರೆ, ಮಾರುಕಟ್ಟೆಗೆ ಹೋಗಿ 10 ಬಗೆಯ ಸೊಪ್ಪು ತರಕಾರಿ ತರಲು ಸಾಧ್ಯವಾಗಲ್ಲ ಎಂದರು.

ಪ್ರಪಂಚದ ಕೆಲ ಶ್ರೀಮಂತ ಭಾಷೆಗಳ ಪೈಕಿ ಕನ್ನಡ ಭಾಷೆಯೂ ಒಂದು. ಕನ್ನಡ ಜನಪದ ಪದಕೋಶದಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಪದಗಳಿವೆ. ವಿಶ್ವವಿದ್ಯಾಲಯಗಳು ಕಲಿಸುವ ಕನ್ನಡಕ್ಕಿಂತಲೂ ಬೀದಿಬದಿ ವ್ಯಾಪಾರಿ ಕಲಿಸುವ ಕನ್ನಡ ಅದ್ಭುತವಾಗಿರುತ್ತದೆ ಎಂದು ಹೇಳಿದರು.

ಇಂಗ್ಲಿಷ್ ಭಾಷೆ ಬಲ್ಲವರು ದೊಡ್ಡ ಪಂಡಿತರಂತೆ ಬಿಂಬಿಸಿಕೊಳ್ಳುತ್ತಾರೆ. ಆದರೆ ಭಾಷೆ ಒಂದು ಅತಾರ್ಕಿಕ ಮತ್ತು ಅಸ್ಪಷ್ಟ ಎಂದು ಅವರಿಗೆ ತಿಳಿದಿರುವುದಿಲ್ಲ. ಈ ಮಾತನ್ನು ಇಂಗ್ಲಿಷ್ ಕವಿ ಜಾರ್ಜ್ ಬರ್ನಾಡ್ ಷಾ ಒಪ್ಪಿಕೊಂಡಿದ್ದಾರೆ. ಬ್ರಿಟಿಷರ ಈ ಇಂಗ್ಲಿಷ್ ನಮ್ಮನ್ನು ಕಾಡುವಷ್ಟು, ಇಂಗ್ಲೆಂಡ್ ಅಕ್ಕಪಕ್ಕದ ದೇಶಗಳಾದ ಜರ್ಮನಿ, ಫ್ರಾನ್ಸ್ ದೇಶವನ್ನು ಕಾಡುತ್ತಿಲ್ಲ. ಶೇ.70ರಷ್ಟು ಇಂಗ್ಲಿಷ್ ಪದಗಳು ಲ್ಯಾಟಿನ್, ಗ್ರೀಕ್ ಭಾಷೆಯಿಂದ ಎರವಲು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ಇಂಗ್ಲಿಷ್ ಭಾಷೆ ಮೂಲಕ ಪ್ರಪಂಚದಲ್ಲಿ ನಡೆಯುವ ಎಲ್ಲ ಘಟನೆಗಳ ಬಗ್ಗೆ ಇತರ ದೇಶಗಳಿಗೆ ತಿಳಿಸಲು ಪ್ರಯತ್ನಿಸುತ್ತದೆ. ಇದರಿಂದಾಗಿಯೇ ಅದು ಪ್ರಪಂಚದ ಬಹುಸಂಖ್ಯಾತ ಜನರು ಮಾತನಾಡುವ ಭಾಷೆಯಲ್ಲಿ ಒಂದಾಗಿದೆ. ಆದ್ದರಿಂದ ನಮ್ಮ ಕನ್ನಡ ಭಾಷೆಯೂ ಪ್ರಪಂಚದ ವಿಷಯಗಳನ್ನು ಇತರಿಗೆ ತಿಳಿಸುವಂತಾದಾಗ ಅದು ಸಹ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸದ್ವಿದ್ಯಾ ಸಂಸ್ಥೆಯ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕನ್ನಡ ಭಾಷೆ, ನಾಡು-ನುಡಿ ಕುರಿತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಪ್ರೊ.ವಿ.ಕೆ. ಗೋಪಾಲಾಚಾರ್, ಉಪಾಧ್ಯಕ್ಷ ಸಿ.ಆರ್. ನಾಗರಾಜ್, ಕಾರ್ಯದರ್ಶಿ ಎಂ.ಎಸ್.ಕೆ. ನರಹರಿಬಾಬು, ಸಹಕಾರ್ಯದರ್ಶಿ ಪ್ರೊ.ಕೆ.ಎಸ್. ಹಿರಿಯಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೈ.ಆರ್. ರಮೇಶ್, ಪ್ರೌಢಶಾಲೆ ಮುಖ್ಯೋಪಾದ್ಯಾಯ ರಾಮಚಂದ್ರಭಟ್, ಕನ್ನಡ ವಿಭಾಗದ ಮುಖ್ಯಸ್ಥ ಕೃ.ಪಾ. ಮಂಜುನಾಥ್ ಹಾಗೂ ಶಿಕ್ಷರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net