ಕನ್ನಡ ಭಾಷೆ ಕಲಿಯಲು ಪ್ರಯತ್ನಿಸುವೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿಕೆ

mysore
Published on

ಮೈಸೂರು: ನಿಮಗೆ ಕನ್ನಡ ಬರುತ್ತದೆಯೇ? ಎಂಬ ಪ್ರಶ್ನೆಗೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಕಲಿಯಲು ಪ್ರಯತ್ನಿಸುವೆ...!

-ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೌಮ್ಯವಾಗಿ ಉತ್ತರಿಸಿದ ಪರಿ ಇದು.

ಉಭಯ ಗಣ್ಯರ ನಡುವೆ ನಡೆದ ಆತ್ಮೀಯ ಸವಾಲು-ಜವಾಬಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಾಕ್ಷಿಯಾಯಿತು.

ಮೊದಲು ಭಾಷಣಕ್ಕಿಳಿದ ಸಿಎಂ ಸಿದ್ದರಾಮಯ್ಯ, ‘ನಾನು ಕನ್ನಡದಲ್ಲೇ ಮಾತನಾಡುವೆ. ನಿಮಗೆ ಕನ್ನಡ ಬರುತ್ತದೆಯೇ?’ ಎಂದು ಪ್ರಶ್ನಿಸಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸಿದ ರಾಷ್ಟ್ರಪತಿಯವರು, ನಮಸ್ಕಾರ ಕರ್ನಾಟಕ! ಕನ್ನಡ ನನ್ನ ಮಾತೃಭಾಷೆಯಲ್ಲ. ಹೀಗಾಗಿ ನನಗೆ ಕನ್ನಡ ಭಾಷೆ ಬರಲ್ಲ. ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಭಾಷೆಯನ್ನು ಕಲಿಯಲು ಪ್ರಯತ್ತಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಜತೆಗೆ ಕನ್ನಡ ಸೇರಿದಂತೆ ಭಾರತದ ಎಲ್ಲ ಭಾಷೆಗಳು, ಸಂಸ್ಕೃತಿ, ಪರಂಪರೆ ಮೇಲೆ ಒಲವು, ಸನ್ಮಾನ, ಗೌರವ ಇದೆ. ಭಾಷಾ ಜೀವಂತಿಕೆ ಹೀಗೆ ಮುಂದುವರಿಸಿಕೊಂಡು ಹೋಗೋಣ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಬೆಂಬಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net