

ಸಿಂಧನೂರು: ಕನ್ನಡ ನಾಡು-ನುಡಿಯ ಉಳಿವಿಗಾಗಿ ಕಸಾಪ ನಿರಂತರ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದರು.
ನಗರದ ಡಾ.ತಿಮ್ಮನಗೌಡ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ಮಹೋನ್ನತ ಸ್ಥಾನವಿದ್ದು, ಅದನ್ನು ಎತ್ತಿ ಹಿಡಿಯುವ ಕೆಲಸ ನಿರಂತರವಾಗಿ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಇನ್ನಷ್ಟು ಚುರುಕುಗೊಂಡು ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದರು.
ಉಪನ್ಯಾಸಕ ಯರಿಯಪ್ಪ ಬೆಳಗುರ್ಕಿ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣದೊಂದಿಗೆ ಸಂಸ್ಕಾರ ಪಡೆಯಬೇಕು. ವೈಚಾರಿಕತೆ, ವಿಜ್ಞಾನ, ವ್ಯವಸ್ಥಿತವಾದ ಅಧ್ಯಯನ, ವಾಸ್ತವತೆ ಬೆಲೆ ಕೊಡಬೇಕು. ಯಾರು ಕೂಡ ಮೂಢನಂಬಿಕೆಗೆ ಒಳಗಾಗಬಾರದು. ಅರಿವು ವಿಸ್ತಾರವಾದಷ್ಟು ಪ್ರಬುದ್ದರಾಗುತ್ತೇವೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಉದ್ಯಮಿ ಬಸವರಾಜ ಸಾಹುಕಾರ ಕುರುಕುಂದ, ಡಾ.ತಿಮ್ಮನಗೌಡ ಪ್ರೌಢ ಶಾಲೆ ಅಧ್ಯಕ್ಷ ವಿಜಯಕುಮಾರ, ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಫಕೀರಪ್ಪ ತಿಡಿಗೊಳ, ಪತ್ರಕರ್ತ ಚಂದ್ರಶೇಖರ ಯರದಿಹಾಳ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ಕಟ್ಡಿಮನಿ, ಕರ್ನಾಟಕ ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಮೌನೇಶ ದೊರೆ, ಆಟೋ ಘಟಕ ಅಧ್ಯಕ್ಷ ಶರಣಪ್ಪ ನಾಯಕ ಇತರರಿದ್ದರು.