

ಕಲಬುರಗಿ: ಕನ್ನಡ ಭಾಷಾ ಅಭಿವೃದ್ಧಿಯಲ್ಲಿ ತಾತ್ಸಾರ ಕಂಡುಬರುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ದೂರಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕನ್ನಡ ಉಳಿದರೆ ಮಾತ್ರ ನಾಡು ಉಳಿಯುತ್ತದೆ. ನೆಲದ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ತಮಿಳುನಾಡು ಭಾಷಾ ಅಭಿವೃದ್ಧಿಗೆ ೮೦ ಕೋಟಿ ಅನುದಾನ ಬರುತ್ತದೆ. ಆದರೆ ಕನ್ನಡ ಭಾಷಾಭಿವೃದ್ಧಿಗೆ ಕೇವಲ ಒಂದು ಕೋಟಿ ರೂ. ಬರುತ್ತಿದೆ. ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ದೇಶದಲ್ಲಿ ಶೇ.೪೦ ಆದಾಯ ಕರ್ನಾಟಕದಿಂದಲೇ ಹೋಗುತ್ತಿದೆ. ಆದರೂ ನಮಗೆ ಅನುದಾನ ಕಡಿಮೆ. ಜ್ಞಾನವೇ ಬಲ, ನಮ್ಮ ನಾಡಿನ ಬಗ್ಗೆ ಜ್ಞಾನ ಸಂಪಾದಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಪರಿಷತ್ ಸಾಹಿತ್ಯ ಜತೆ ಸಾಮಾಜಿಕ, ಆರೋಗ್ಯ ಚಟುವಟಿಕೆಗಳತ್ತಲೂ ಗಮನಹರಿಸುತ್ತಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕವಿ, ಬರಹಗಾರರು ಸಮಾಜಮುಖಿ ಚಿಂತಕರಾಗಬೇಕು. ತಮ್ಮ ಕಾವ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅಗತ್ಯವಿದೆ ಎಂದರು.
ವಾಗ್ಮಿ ಪಂಡಿತ ನೆಲ್ಲಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಪ್ರಮುಖರಾದ ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ವಿನೋದ ಜನೇವರಿ, ಶಕುಂತಲಾ ಪಾಟೀಲ್, ಸುರೇಶ ದೇಶಪಾಂಡೆ, ಗುರುಬಸಪ್ಪ ಸಜ್ಜನಶೆಟ್ಟಿ, ನಾಗಪ್ಪ ಸಜ್ಜನ್, ಎಸ್.ಕೆ. ಬಿರಾದಾರ್, ಪ್ರಭುಲಿಂಗ ಮೂಲಗೆ, ಶಾಮಸುಂದರ ಕುಲಕರ್ಣಿ, ಸಿ.ಎಸ್. ಆನಂದ, ಮಲ್ಲಿನಾಥ ಸಂಗಶೆಟ್ಟಿ, ಪ್ರಭವ ಪಟ್ಟಣಕರ್, ಮಾಲಾ ಕಣ್ಣಿ, ಲಕ್ಷö್ಮಣರಾವ್ ಕಡಬೂರ, ಡಾ.ರೆಹಮಾನ್ ಪಟೇಲ್, ಗಣೇಶ ಚಿನ್ನಾಕಾರ ಇತರರಿದ್ದರು. ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.