

ಬೀದರ್: ಕನ್ನಡ ಭವನಕ್ಕೆ ಸದ್ಯ ಬಿಡುಗಡೆಯಾದ 2 ಕೋಟಿ ರೂ.ಗಳಲ್ಲಿ ಕೆಲಸ ಮಾಡಿದ ನಂತರವೇ ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಹೋಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.
ಜಿಲ್ಲಾಡಳಿತ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಸಾಪದಿಂದ ಗುರುದ್ವಾರ ಹತ್ತಿರದ ಚಿಕ್ಕಪೇಟ್ ರಸ್ತೆಯ ಜಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಭವನಕ್ಕೆ ಅನುದಾನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಒಂದು ಎಕರೆ ಜಾಗದಲ್ಲಿ 8 ಕೋಟಿ ರೂ. ವೆಚ್ಚದ ಕನ್ನಡ ಭವನ ನಿರ್ಮಾಣಕ್ಕಾಗಿ ಪರಿಷತ್ ಕ್ರಿಯಾಯೋಜನೆ ತಯಾರಿಸಿದೆ. ಈಗಾಗಲೇ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದ್ದು, 1 ಕೋಟಿ ರೂ. ಬಿಡುಗಡೆಯಾಗಿದೆ. ಎರಡು ಕೋಟಿ ರೂ. ಖರ್ಚಾದ ನಂತರ ಹೆಚ್ಚುವರಿ ಅನುದಾನಕ್ಕೆ ನಿಯೋಗದ ಮೂಲಕ ಸಿಎಂ ಅವರನ್ನು ಭೇಟಿಯಾಗೋಣ. ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನ ತರುವೆ ಎಂದು ಭರವಸೆ ನೀಡಿದರು.
ನಾಲ್ಕು ದಶಕದಿಂದ ಅನೇಕ ಸರ್ಕಾರಗಳು ಬಂದುಹೋಗಿವೆ. ಆದರೆ ಯಾವೊಂದು ಸರ್ಕಾರ ಭವನದ ಕಡೆ ಗಮನಹರಿಸಿಲ್ಲ. ಆದರೆ ನಾನು ವಾಗ್ದಾನ ಮಾಡಿದಂತೆ ಸಚಿವನಾದ ಬಳಿಕ ಈಡೇರಿಸಿದ್ದೇನೆ. ಕಸಾಪ ಯೋಜನೆಯಂತೆ ಸುಂದರವಾದ ಭವನ ನಿರ್ಮಾಣ ಆಗಲಿ ಎಂದ ಅವರು, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಕನ್ನಡ ಭವನಕ್ಕಾಗಿ ಕಾನೂನು ಚೌಕಟ್ಟಿನಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಅಕ್ಕ ಅನ್ನಪೂರ್ಣ, ಶಾಸಕ ರಹೀಮ್ ಖಾನ್, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಎಂಎಸ್ಐಎಲ್ ನಿರ್ದೇಶಕ ಬಾಬು ವಾಲಿ, ಶಾಹೀನ್ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜ್ಞಾನಸುಧಾ ಸಂಸ್ಥೆ ಅಧ್ಯಕ್ಷೆ ಪ್ರೊ.ಪೂರ್ಣಿಮಾ ಜಿ., ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ರಾಜೇಂದ್ರಕುಮಾರ ಗಂದಗೆ ಇತರರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಬಸವರಾಜ ಬಲ್ಲೂರ್ ನಿರೂಪಣೆ ಮಾಡಿದರು. ಡಾ.ರಾಜಕುಮಾರ ಹೆಬ್ಬಾಳೆ ವಂದಿಸಿದರು. ಈ ವೇಳೆ ಪರಿಷತ್ ತಾಲೂಕು, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ, ತಾಲೂಕು ಮಟ್ಟದ ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಿದ್ಧಾರೂಢ ಗುಂಪಾದಿಂದ ಕಾರ್ಯಕ್ರಮ ಜರುಗುವ ಸ್ಥಳದವರೆಗೆ ಬೈಕ್ ರ್ಯಾಲಿ ನಡೆಯಿತು.
ಭವನಕ್ಕೆ ಹಲವರ ದೇಣಿಗೆ
ಕನ್ನಡ ಭವನ ಕಟ್ಟಡಕ್ಕಾಗಿ ಮಠಾಧೀಶರು, ವಿವಿಧ ಸಂಘ ಸಂಸ್ಥೆಗಳಿಂದ ದೇಣಿಗೆ ನೀಡಲಾಯಿತು. ಸಮಾರಂಭದ ವೇದಿಕೆಯಲ್ಲಿ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ 2 ಲಕ್ಷ ರೂ. ನಗದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ 1 ಲಕ್ಷ ರೂ. ಚೆಕ್ ಕಸಾಪಗೆ ನೀಡಿದರು. ಈ ವೇಳೆ ಜಿಲ್ಲಾ ಗ್ರಾಪಂ ಲೆಕ್ಕಿಗರ ಸಂಘದ ಅಧ್ಯಕ್ಷ ಶಿವಾನಂದ ಪಾಟೀಲ್ ಮಾತನಾಡಿ, ಜಿಲ್ಲೆಯ ಎಲ್ಲ ಲೆಕ್ಕಾಧಿಕಾರಿಗಳ ಒಂದು ದಿನದ ವೇತನವನ್ನು ಕನ್ನಡ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದರು. ಪದಾಧಿಕಾರಿಗಳ ಸಭೆ ನಡೆಸಿ ಒಂದು ದಿನದ ವೇತನ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಗಂದಗೆ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಈ ಮೊದಲೇ ತಮ್ಮ 2 ತಿಂಗಳ ವೇತನವನ್ನು ಕನ್ನಡ ಭವನಕ್ಕೆ ನೀಡುವುದಾಗಿ ಘೋಷಿಸಿದ್ದಾರೆ.
ವಸತಿ ಯೋಜನೆ ರೂಪಿಸಿ
ಕನ್ನಡ ಸಾಹಿತ್ಯ ಪರಿಷತ್ ಬಡ, ಹಿಂದುಳಿದ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ವಸತಿ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಸೆ ವ್ಯಕ್ತಪಡಿಸಿದರು. ಜಿಲ್ಲಾಡಳಿತದಿಂದ ಹೊಸ ಲೇಔಟ್ ಕೆಲಸ ನಡೆಯುತ್ತಿದೆ. ಪ್ರತ್ಯೇಕವಾಗಿ ಸಾಹಿತಿ, ಪರಿಷತ್ ಮತ್ತು ಕನ್ನಡಪರ ಸಂಘ ಸಂಸ್ಥೆಗಳ ಹಿಂದುಳಿದವರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು. ಇದರಿಂದ ಸೂರು ಇಲ್ಲದ ಹಲವರಿಗೆ ಸದುಪಯೋಗವಾಗಲಿದೆ ಎಂದು ಸಲಹೆ ನೀಡಿದರು. ಕೃಷಿ ಜತೆಗೆ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆಗಾಗಿ ಜಿಲ್ಲೆಯ 1 ಲಕ್ಷ ರೈತರಿಗೆ ಹಸುಗಳನ್ನು ನೀಡುವ ಪೈಲೆಟ್ ಯೋಜನೆ ಜಾರಿಗೆ ತರುವ ಮೂಲಕ ಅನುವು ಮಾಡಿಕೊಡಬೇಕು. ಪಶು ಸಂಗೋಪನಾ ಸಚಿವ ಚವ್ಹಾಣ್ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಬಿಜೆಪಿಯಲ್ಲಿ ಅನೇಕ ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಎಂಎಸ್ಐಎಲ್ ನಿರ್ದೇಶಕರಾದ ಬಾಬು ವಾಲಿ ಅವರಿಗೆ ಬರುವ ದಿನಗಳಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷರಾಗುವ ಯೋಗ ಕೂಡಿ ಬರಲಿದೆ ಎಂದು ನಾಗಮಾರಪಳ್ಳಿ ಭವಿಷ್ಯ ನುಡಿದರು.
ಯಡಿಯೂರಪ್ಪ ಬದಲಾಯಿಸಿದರೆ ಕ್ರಾಂತಿ
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುವ ಮಾತು ಕೇಳಿಬರುತ್ತಿದೆ. ಒಂದು ವೇಳೆ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿದರೆ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂದು ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು. ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಯಡಿಯೂರಪ್ಪ ನೀಡುತ್ತಿದ್ದಾರೆ. ಜನಪರ ಯೋಜನೆಗಳ ಜಾರಿ ಮೂಲಕ ಬಡವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂಥವರನ್ನು ಬದಲಾಯಿಸುವ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಅವರನ್ನು ಬದಲಾಯಿಸಿದೆ ಕ್ರಾಂತಿ ಆಗುತ್ತದೆ ಎಂದು ಬಿಎಸ್ ವೈ ಅವರನ್ನು ಕೇಳಗಿಳಿಸಲು ಪ್ರಯತ್ನಿಸುವವರಿಗೆ ಪೂಜ್ಯರು ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದರು. ಹುಲಸೂರು ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಸಿಗದಿದ್ದಲ್ಲಿ ಗುರು ಬಸವೇಶ್ವರ ಸಂಸ್ಥೆಯಿಂದ ನಿವೇಶನ ನೀಡಲಾಗುವುದು. ಕನ್ನಡ ನಾಡು, ನುಡಿ ಅಭಿವೃದ್ಧಿಗಾಗಿ ಪರಿಷತ್ ಗೆ ಸದಾ ಬೆಂಬಲಿಸುವುದಾಗಿ ಅಭಯ ನೀಡಿದರು.