ಕನ್ನಡ ಬೆಳೆಸಿ ನಾಡಿನ ಋಣ ತೀರಿಸಿ

29-99
ಚಿಕ್ಕೋಡಿ ಸಿಎಲ್‌ಇ ಸಂಸ್ಥೆಯ ಬಿ.ಸಿ.ಗಂಗಾಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ ಸ್ಪರ್ಧೆಗೆ ಚಿಕ್ಕೋಡಿ ಸಂಪಾದನಾ ಮಹಾಸ್ವಾಮೀಜಿ ಚಾಲನೆ ನೀಡಿದರು. ಡಾ. ಪ್ರಕಾಶ ಭೋಜೆ, ಸುರೇಶ ಉಕ್ಕಲಿ ಇದ್ದರು.
Published on

ಚಿಕ್ಕೋಡಿ, ಬೆಳಗಾವಿ: ಕನ್ನಡ ನಾಡಿನ ಕಲೆ ಮತ್ತು ಭಾಷೆಯನ್ನು ಅಭಿಮಾನದಿಂದ ಆರಾಧಿಸಿ, ಬೆಳೆಸಿ ತಾಯ್ನಡಿನ ಋಣ ತೀರಿಸಬೇಕೆಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮೀಜಿ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಸಿ.ಎಲ್.ಇ ಸಂಸ್ಥೆಯ ಬಿ.ಸಿ.ಗಂಗಾಲ ಶಿಕ್ಷಣ ಮಹಾವಿದ್ಯಾಲಯ, ರಂಗದರ್ಶನ ಗ್ರಾಮೀಣ ವಿಕಾಸ ಸಂಗ ಹಾಗೂ ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ, ಧುಳಗನವಾಡಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂತಸಗೊಳಿಸುವ ಶಕ್ತಿ ಸಂಗೀತದಲ್ಲಿದೆ ಎಂದರು. ಹಿರಿಯ ಸಾಹಿತಿ ಡಾ. ಪ್ರಕಾಶ ಭೋಜೆ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಯಿಂದ ಕನ್ನಡತನ ಬೆಳೆಸಬೇಕು. ಕಲಾ ಪರಂಪರೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸರ್ಕಾರ ಕೂಡ ಗಡಿಭಾಗದಲ್ಲಿ ಕನ್ನಡ ಶಿಕ್ಷಣ, ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿ ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಸುರೇಶ ಉಕ್ಕಲಿ ಮಾತನಾಡಿ, ತಾಯ್ನಡಿನ ಭಾಷೆ ದೂರ ಮಾಡದೆ ಪ್ರಾಮುಖ್ಯ ನೀಡುವುದು ನಮ್ಮೆಲ್ಲರ ಕರ್ತವ್ಯಾವಾಗಿದೆ ಎಂದರು.

ಚಿಕ್ಕೋಡಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಪಾದ ಕುಂಬಾರ ಕನ್ನಡ ನಾಡು ನುಡಿ ಪರಂಪರೆ ಬಗ್ಗೆ ಮಾತನಾಡಿದರು. ಶಶಿಕಾಂತ ಜಂಗಿ, ಸುಜಾತಾ ಮಗದುಮ್ಮ ಇದ್ದರು. ಸುಪ್ರಿಯಾ ಕಲಾಚಂದ್ರ ನೇತೃತ್ವದ ಸ್ಥಳೀಯ ಆಶಾದೀಪ ಸಮುದಾಯ ಕಲಾಕೇಂದ್ರ ಹಾಗೂ ಪ್ರಶಿಕ್ಷಣಾರ್ಥಿಗಳು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಚಂದ್ರಕಾಂತ ಬಡಿಗೇರ ಮಹಾದೇವ ಮಾದರ ವಾದ್ಯ ಸಹಕಾರ ನೀಡಿದರು. ಸಂಘಟಕರಾದ ಭರತ ಕಲಾಚಂದ್ರ ಸ್ವಾಗತಿಸಿದರು. ಪ್ರಿಯಾಂಕಾ ಬೆಳೆಸೆ ನಿರೂಪಿಸಿದರು. ಮಾರುತಿ ಕಾಮಗೌಡಾ ವಂದಿಸಿದರು.

ತೆಲಸಂಗ ವರದಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಕೋಟಿ ಕಂಠ ಗೀತಗಾಯನ ಮಹಾ ಕಾರ್ಯಕ್ರಮ ಗ್ರಾಮದ ಗ್ರಾಪಂ ಆವರಣದಲ್ಲಿ ಶುಕ್ರವಾರ ಜರುಗಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ ಮಾತನಾಡಿ, ಕನ್ನಡ ನಾಡಿನ ಎಲ್ಲ ಜನ ಕನ್ನಡ ಕುರಿತ ಗೀತೆಗಳನ್ನು ಹಾಡುವ ಕೋಟಿ ಕಂಠ ಗಾಯನಕ್ಕೆ ಗಡಿ ಗ್ರಾಮ ತೆಲಸಂಗ ಶಕ್ತಿ ತುಂಬಿದೆ. ಕನ್ನಡ ಭಾಷೆ ಶ್ರೀಮಂತಿಕೆಯನ್ನು ಇನ್ನಷ್ಟು ಜಾಗೃತಗೊಳಿಸುವ ಅವಶ್ಯವಿದೆ ಎಂದರು. ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ಪಿಡಿಒ ಬೀರಪ್ಪ ಕಡಗಂಚಿ, ಕಾರ್ಯದರ್ಶಿ ರವೀಂದ್ರ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net