

ಹಾಸನ: ಪ್ರತಿಯೊಬ್ಬ ಕನ್ನಡಿಗನು ತಮ್ಮ ಸಹಿಯನ್ನು ಕನ್ನಡದಲ್ಲೇ ಮಾಡುವ ಹವ್ಯಾಸವನ್ನು ಮೈಗೂಡಿಸಿಕೊಂಡು ಕನ್ನಡ ಬಳಕೆಗೆ ಉತ್ತೇಜನ ನೀಡಬೇಕು ಎಂದು ಸಾಹಿತಿ ಜ.ನಾ. ತೇಜಶ್ರೀ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಐ.ಕ್ಯೂ.ಎ.ಸಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಕೇವಲ ಭಾಷಣಗಳಲ್ಲಿ ಮಾತ್ರ ಕನ್ನಡ ಬಗ್ಗೆ ಮಾತನಾಡುತ್ತೇವೆ ಆದರೇ ಭಾಷೆ ಬೆಳೆಯಬೇಕಾದರೆ ಪ್ರತಿಯೊಬ್ಬ ಕನ್ನಡಿಗರು ತಮ್ಮ ಮಾತೃ ಭಾಷೆಯಾದ ಕನ್ನಡದಲ್ಲೇ ಸಹಿ ಹಾಕುವ ಹವ್ಯಾಸವನ್ನು ಬೆಳೆಸುವ ಮೂಲಕ ಹೊಸ ತರನಾದ ಆಂದೋಲನ ಮಾಡಬೇಕಾಗಿದೆ. ಮಾತೃ ಭಾಷೆ ತಾಯಿ ಇದ್ದಂತೆ, ಹೆತ್ತ ತಾಯಿಯನ್ನು ಪೂಜಿಸುವ ಹಾಗೆಯೇ ನಮ್ಮ ಕನ್ನಡ ಭಾಷೆಯನ್ನು ನಾವುಗಳು ಪೂಜಿಸಬೇಕು ಎಂದು ಹೇಳಿದರು.
ಕನ್ನಡ ಭಾಷೆ ಇತರೆ ಎಲ್ಲಾ ಭಾಷೆಗಳಿಗಿಂತ ಅತ್ಯಂತ ಸರಳವಾದ ಭಾಷೆಯಾಗಿದ್ದು, ಮಾತೃ ಭಾಷೆಯನ್ನು ನಾಡಿನ ಯಾವೊಬ್ಬ ಪ್ರಜೆಯೂ ಕಡೆಗಣಿಸಬಾರದು. ಮಕ್ಕಳು ಪ್ರಾಥಮಿಕ ಹಂತದಿಂದ ಪದವಿ ಪೂರ್ವದ ಶಿಕ್ಷಣದ ವರೆಗೆ ತಮ್ಮ ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿತರೆ ವಿಷಯ ಗ್ರಹಿಕೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗುವುದರ ಜೊತೆಗೆ ಅವರುಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಆದರೇ ಇಂದು ಕನ್ನಡ ಭಾಷೆಯನ್ನು ಕಲಿಯುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಾದರೂ ಮಾತೃ ಭಾಷೆಯ ಬೆಳವಣಿಗೆಗೆ ಯುವಕರು ಮುಂದಾಗಬೇಕು. ಕನ್ನಡ ಭಾಷೆ ಒಂದು ಸಣ್ಣ ಮಗುವಿದ್ದಂತೆ ನಾವು ಸಣ್ಣ ಮಗುವನ್ನು ಯಾವ ರೀತಿ ಮುದ್ದು ಮಾಡುವೆವೊ ಹಾಗೆಯನ್ನು ಭಾಷೆಯನ್ನು ಪ್ರೀತಿಸಿ ಬೆಳೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ. ಕೃಷ್ಣೇಗೌಡ ಮಾತನಾಡಿ, ವಿಶ್ವದಲ್ಲಿ ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿದ್ದು, ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯನ್ನು ಬಳಸುವುದರ ಮೂಲಕ ವ್ಯವಹಾರಿಕ ಭಾಷೆಯನ್ನು ಕಲಿಯಬೇಕಾದ ಅವಶ್ಯಕತೆ ಇದೆ. ಯುವಕರು ಮಾತೃ ಭಾಷೆಯನ್ನು ಅತ್ಯಂತ ಪ್ರೀತಿಯಿಂದ ಕಾಣುವುದರ ಮೂಲಕ ಭಾಷೆಯನ್ನು ಚೆನ್ನಾಗಿ ತಿಳಿಯಬೇಕು. ಇಂದಿನ ಆಧುನಿಕ ಯುಗದಲ್ಲಿ ಕೇವಲ ಒಂದು ಭಾಷೆಗೆ ಸೀಮಿತಗೊಳ್ಳದೆ ಇತರೆ ಭಾಷೆಯನ್ನು ಕಲಿಯಬೇಕಾದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಅತ್ಯಂತ ಮುಖ್ಯವಾಗಿದ್ದು, ಯುವಕರು ಕನ್ನಡ ಭಾಷೆಯ ಜೊತೆ ಜೊತೆಗೆ ಇಂಗ್ಲೀಷ್ ಭಾಷೆಯ ಮೇಲೂ ಹಿಡಿತ ಸಾಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ ವಿಷಯ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗೋಡೆ ಪತ್ರಿಕೆಗಳನ್ನು ಹೊರ ತಂದಿದ್ದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ ಜಿ.ಪಿ. ಯೋಗೇಶ್, ಐಕ್ಯೂಎಸಿ ಸಂಚಾಲಕ ಯೋಗೇಶ್, ಕನ್ನಡ ವಿಭಾಗದ ಅಧ್ಯಪಕರಾದ ಡಾ.ಡಿ. ಶ್ರೀನಿವಾಸ್, ಎಂ.ಕೆ. ಮಹೇಶ್, ರಾಮೇಗೌಡ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಇದ್ದರು.