ಕನ್ನಡ ಪ್ರತಿನಿಧಿತ್ವ ದುರ್ಬಲ

download (2)
Published on

ಮೈಸೂರು: ರಾಷ್ಟ್ರ ಮಟ್ಟದಲ್ಲಿ ಇರುವ ಕನ್ನಡ ಅಧ್ಯಯನ ಪೀಠಗಳು ಮತ್ತು ಕನ್ನಡ ಪ್ರತಿನಿಧಿತ್ವ ದುರ್ಬಲವಾಗುತ್ತಿವೆ ಎಂದು ದೆಹಲಿಯ ಜೆಎನ್‌ಯು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.


ಜಿಲ್ಲಾ ಪತ್ರಕರ್ತರ ಸಂಘ, ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದಲ್ಲಿ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ರಾಜಧಾನಿಯಲ್ಲಿ ಕನ್ನಡ-ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.


ಜಾಗತೀಕರಣ ಮತ್ತು ರಾಷ್ಟ್ರೀಯತೆಯ ಸಂದರ್ಭದಲ್ಲಿ ಕನ್ನಡ ರಾಷ್ಟ್ರ ಮಟ್ಟದಲ್ಲಿ ಬೆಳವಣಿಗೆ ಕಾಣಬೇಕಿತ್ತು. ಹೊಸದಾಗಿ ಕನ್ನಡ ಅಧ್ಯಯನದ ಪೀಠಗಳನ್ನು ತೆರೆಯಬೇಕಿತ್ತು. ಆದರೆ, ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ಈಗ ಕನ್ನಡದ ಪರಿಸ್ಥಿತಿ ದುರ್ಬಲವಾಗಿದೆ. ರಾಷ್ಟ್ರ ಮಟ್ಟದ ಹಲವು ವಿಶ್ವವಿದ್ಯಾಲಯಗಳಲ್ಲಿ ಇದ್ದ ಕನ್ನಡ ಅಧ್ಯಯನ ಪೀಠಗಳನ್ನು ಮುಚ್ಚಲಾಗಿದೆ. ದೆಹಲಿ ವಿವಿಯಲ್ಲಿ ಯುಜಿಸಿಯಿಂದ ಮಂಜೂರಾದ ಎರಡು ಕನ್ನಡ ಬೋಧಕರ ಹುದ್ದೆಗಳೂ ಖಾಲಿ ಇವೆ. ಅದನ್ನು ನೇಮಕ ಮಾಡಿಲ್ಲ ಎಂದರು.


ಮಲೆಯಾಳಂ ಮನೋರಮ ಒಂದೇ ಪತ್ರಿಕೆಗೆ 20 ಜನ ಮಲೆಯಾಳಿ ಪತ್ರಕರ್ತರು ದೆಹಲಿಯಲ್ಲಿದ್ದಾರೆ. ಆದರೆ, ಕನ್ನಡದ ಎಲ್ಲ ಪತ್ರಿಕೆಗಳನ್ನು ಸೇರಿದಂತೆ ಕೇವಲ 5 ಜನ ಮಾತ್ರ ಇದ್ದಾರೆ. ಹೀಗಾಗಿ, ಬೇರೆ ಭಾಷೆಗೆ ಹೋಲಿಸಿದರೆ, ಕನ್ನಡ ಮತ್ತು ಕರ್ನಾಟಕದ ಪ್ರತಿನಿಧಿತ್ವ ಸಡಿಲವಾಗುತ್ತಿದೆ. ಕನ್ನಡಿಗರು ಹೊರಗೆ ಹೋಗುವುದಕ್ಕಿಂತ, ಒಳಗೆ ಬಂದವರನ್ನು ಸೇರಿಸಿಕೊಳ್ಳುವುದರಲ್ಲಿ ಉದಾರಿಗಳು ಎಂದು ಅಭಿಪ್ರಾಯಪಟ್ಟರು.


ತಮಿಳು ಮತ್ತು ಮಲೆಯಾಳಿ ಭಾಷಿಗ ಐಎಎಸ್ ಅಧಿಕಾರಿಗಳು ಮತ್ತು ಸಂಸದರು ಒಂದೆಡೆ ಕೂತು ಚರ್ಚಿಸಿ ತಮ್ಮ ರಾಜ್ಯದಲ್ಲಿ ಯಾವ ಕೆಲಸ ಬಾಕಿ ಇದೆ, ಏನು ಕೆಲಸ ಮಾಡಿಕೊಳ್ಳಬೇಕು ಎಂದು ಅರಿತು ಅದರ ಪ್ರಸ್ತಾಪವನ್ನು ಪ್ರಧಾನಿಗೆ ತಲುಪಿಸಿ, ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ, ಇಂತಹ ಕೆಲಸಗಳು ನಮ್ಮವರಿಂದ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಂಗಕರ್ಮಿ ಜನಾರ್ದನ್ (ಜನ್ನಿ), ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮೈಸೂರು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net