

ಪಾಂಡವಪುರ: ಕನ್ನಡ ಒಂದು ಪರಿಪೂರ್ಣ ಭಾಷೆಯಾಗಿ ಭಾವನೆ, ವ್ಯಕ್ತಿತ್ವ, ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ..ನಿಂಗರಾಜ್‌ಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ 7150 ಭಾಷೆ ಕಾಣಬಹುದಾಗಿದೆ, ದೇಶದಲ್ಲಿ 398ಕ್ಕೂ ಅಧಿಕ ಭಾಷೆಗಳಿದ್ದು, ಕನ್ನಡ ಭಾಷೆ ಪುರಾತನ ಸಂಸ್ಕೃತಿ ಹಾಗೂ ಇತಿಹಾಸ ಹೊಂದಿದೆ. ಕನ್ನಡ ಭಾಷೆಗೆ ವಿಶಿಷ್ಠ ಸ್ಥಾನಮಾನ ಪಡೆಯುವ ಜತೆಗೆ ಶ್ರೀಮಂತವಾಗಿದೆ. ಆದರೆ ಗಡಿಭಾಗದಲ್ಲಿ ಅನ್ಯ ಭಾಷೆಗಳಿಂದ ಆಕ್ರಮಣದಿಂದ ಕನ್ನಡ ಭಾಷೆ ನಶಿಸಿಸುತ್ತಿದೆ. ಕನ್ನಡ ಭಾಷೆ ಮಾತನಾಡುವುದು ಮತ್ತು ಹೆಚ್ಚು ಬಳಸಿದರೆ ಮಾತ್ರ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಸ್ವಾತಂತ್ರಾೃನಂತರ ಹರಿದು ಹಂಚಿಹೋಗಿದ್ದ ಕನ್ನಡದ ಹಲವು ಪ್ರಾಂತ್ಯಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನಾಗಿ ಏಕೀಕರಣಗೊಳಿಸಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು ಸೇರಿದಂತೆ ರಾಜ್ಯದ ಅನೇಕ ಸಾಹಿತಿ, ಕವಿಗಳು ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಹೊರ ದೇಶ ಮತ್ತು ಹೊರ ರಾಜ್ಯದ ವಿವಿಧ ಹೊಸತನಗಳನ್ನು ರಾಜ್ಯಕ್ಕೆ ಪರಿಚಯಿಸಿದರು. ಇತರೆಲ್ಲ ಭಾಷೆಗಳಿಗಿಂತ ಕನ್ನಡ ಭಾಷೆ ವಿಶೇಷತೆಗಳಿಂದ ಕೂಡಿದೆ ಎಂದು ಬಣ್ಣಿಸಿದರು.
ಪ್ರಾಧ್ಯಾಪಕಿ ಉಷಾ ಕ್ಯಾತನಹಳ್ಳಿ ಮಾತನಾಡಿ, 3ನೇ ಶತಮಾನದಲ್ಲಿಯೇ ಕನ್ನಡಿಗರ ಅಸ್ಮಿತೆ ಆರಂಭವಾಗಿದೆ. ಕುರುಕ್ಷೇತ್ರ ಸಂದರ್ಭದಲ್ಲಿಯೇ ಕನ್ನಡಿಗರು ಇದ್ದರು ಎಂಬುದಾಗಿ ಪುರಾವೆಗಳಿವೆ. ಭುವನೇಶ್ವರಿ ನಮ್ಮ ನಾಡದೇವತೆಯಾಗಿದ್ದಾಳೆ. ಆದರೆ ಚಾಮುಂಡೇಶ್ವರಿ ನಮ್ಮ ನಾಡದೇವತೆ ಎಂದು ಹೇಳುವುದು ಸರಿಯಲ್ಲ. ಕದಂಬರು ಪೂಜಿಸುತ್ತಿದ್ದ ಭುವನೇಶ್ವರಿ ತಾಯಿ ನಮ್ಮ ನಾಡದೇವತೆಯಾಗಿದ್ದಾಳೆ ಎಂದರು.
ಭಾಷೆ, ನೆಲ ಅತ್ಯಂತ ಸೂಕ್ಷ್ಮವಾದ್ದವು. ಕನ್ನಡಿಗರು ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ಒಂದಾಗಬೇಕು. ಜತೆಗೆ ಕನ್ನಡವನ್ನು ತಪ್ಪಿಲ್ಲದಂತೆ ಓದಿ, ಬರೆಯಲು ಬಂದರೆ ಸಾಕು ಕನ್ನಡ ಭಾಷೆಯನ್ನು ಉಳಿಸಿದಂತಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸದಿದ್ದರೂ ಪರವಾಗಿಲ್ಲ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಓದಲು, ಬರೆಯಲು ಕಲಿಸಿದರೆ ಸಾಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು, ಉಪಾಧ್ಯಕ್ಷ ಎಲ್.ಅಶೋಕ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಎಂ.ಜೆ.ನಾಗೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲಯನ್ ಟಿ.ಪಿ.ರೇವಣ್ಣ, ಶಶಿಕಲಾ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಇತರರು ಇದ್ದರು.