ಕನ್ನಡ ಪತ್ರಿಕೆಗಳನ್ನು ಕೊಂಡು ಓದುವುದನ್ನು ರೂಢಿಸಿಕೊಳ್ಳಿ

mysore
Published on

ಮೈಸೂರು: ಎಲ್ಲರೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ, ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ಜನತಾನಗರದ ಮೌರ್ಯ ಆಸ್ಪತ್ರೆಯ ಆವರಣದಲ್ಲಿ

ಆಯೋಜಿಸಿದ್ದ ಕನ್ನಡ ಪತ್ರಿಕೆ ಕೊಂಡು ಓದಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆಯಲ್ಲಿ ಸುಲಭವಾಗಿ ಅರ್ಥ ಮಾಡಿಕೊಂಡಷ್ಟು ಬೇರೆ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಕನ್ನಡ ಭಾಷೆ ಉಳಿಯಲು, ಬೆಳೆಯಲು ಪತ್ರಿಕೆಗಳು ಮತ್ತು ಪುಸ್ತಕಗಳು ಮುಖ್ಯ. ಕನ್ನಡ ಪತ್ರಿಕೆ, ಭಾಷೆಯನ್ನು ಉಳಿಸ ಬೆಳೆಸಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು ಎಂದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಓದುವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಯುವಕರು ಈಗ ಇ-ಪೇಪರ್ ಓದುತ್ತಿದ್ದಾರೆ. ಮುದ್ರಣ ಪತ್ರಿಕೆಯ ಜತೆಗೆ ಇ-ಪೇಪರ್ ಕೂಡ ಓದುತ್ತಿದ್ದಾರೆ ಎಂದರು.

ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೆಗಳ ಕೊಡುಗೆ ಅಪಾರ. ಸುಲಭ ಸಂವಹನಕ್ಕೆ ಮಾತೃಭಾಷೆ ಮುಖ್ಯ. ಹಾಗೆಯೇ, ಮಾತೃ ಭಾಷೆಯ ಪತ್ರಿಕೆಗಳು ಕೂಡ ಮುಖ್ಯ. ಪತ್ರಿಕೆಗಳಲ್ಲಿ ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಅಪರಾಧ ವರದಿಗಳೇ ಹೆಚ್ಚೆಂದು ಜನರು ತಿಳಿದುಕೊಂಡಿದ್ದಾರೆ. ಆದರೆ, ಪ್ರತಿಯೊಂದು ವಿಚಾರಗಳು ಪತ್ರಿಕೆಗಳಲ್ಲಿ ಇರುತ್ತದೆ. ಸಾಮಾಜಿಕ ನ್ಯಾಯ, ಸಾಮರಸ್ಯ, ಸಹಬಾಳ್ವೆ ಮೂಡಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಗರಾಧ್ಯಕ್ಷ ಕೆ.ಎಸ್.ಶಿವರಾಮ್, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಮೌರ್ಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಆನಂದ್, ಮಾಜಿ ಮೇಯರ್‌ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರವಿನಂದನ್, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net