ಕನ್ನಡ ನಾಮಫಲಕ ಕಡ್ಡಾಯಗೊಳಿಸದಿದ್ದರೆ ಉಗ್ರ ಹೋರಾಟ, ಮಹಾನಗರ ಪಾಲಿಕೆಗೆ ಕರವೇ ಎಚ್ಚರಿಕೆ

1718864041616
Published on

ವಿಜಯಪುರ: ಕಳೆದ 25 ವರ್ಷಗಳಿಂದ ನಾಡು- ನುಡಿ, ನೆಲ- ಜಲ ಸೇರಿದಂತೆ ಅನೇಕ ವಿಷಯಗಳನ್ನು ಇಟ್ಟುಕೊಂಡು ಕರವೇ ಹೋರಾಟ ಮಾಡುತ್ತಾ ಬಂದಿದೆ. ಇದೀಗ ನಾಮ ಫಲಕ ಕನ್ನಡದಲ್ಲಿಯೇ ಇರಬೇಕೆಂದು ಹೋರಾಟ ಮಾಡಿದ ಫಲವಾಗಿ ಸರ್ಕಾರ ಕೂಡ ಸುಗ್ರೀವಾಜ್ಞೆ ಹೊರಡಿಸಿದೆ. ಹೀಗಾಗಿ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳನ್ನು ಎಚ್ಚರಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಹೇಳಿದರು.

ವಿಜಯಪುರ ಮಹಾನಗರ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಕೆ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಕ್ಕೆ ಬಂದಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ಆಯುಕ್ತರು ಕೂಡಲೇ ಎಲ್ಲ ನಾಮ ಫಲಕಗಳನ್ನು ಕನ್ನಡಮಯಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು‌.

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಾದರೂ ಈವರೆಗೂ ಅನುಷ್ಟಾನಕ್ಕೆ ಬಂದಿಲ್ಲ. ಹೀಗಾಗಿ ಜಿಲ್ಲೆಗೆ ವೈದ್ಯಕೀಯ ಕಾಲೇಜ್ ಆರಂಭಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಲಾಗುವುದು. ಜಿಲ್ಲೆಯ ಇಬ್ಬರು ಸಚಿವರು ಮುತುವರ್ಜಿ ವಹಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.

ಇನ್ನು ರೈತರಿಗೆ ಈ ಬಾರಿ ಮುಂಗಾರು ಕೈ ಹಿಡಿದಿದೆ. ಸರ್ಕಾರ ತ್ವರಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಬೇಕು. ಸಹಾಯಧನ ನೀಡಬೇಕು. ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಬರಬೇಕಾದ ಸಹಾಯಧನ ಹಾಗೂ ಪರಿಹಾರ ಹಣ ನೀಡುತ್ತಿಲ್ಲ. ಹೀಗಾಗಿ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಜಿಲ್ಲೆಯಲ್ಲಿ ಕೊಲೆ ಹಾಗೂ ಸುಲಿಗೆ ಪ್ರಕರಣ ಹೆಚ್ಚಾಗಿವೆ. ಮುದ್ದೇಬಿಹಾಳ, ಚಡಚಣ, ವಿಜಯಪುರ ದಲ್ಲಿ ಹಾಡಹಗಲೇ ಕೊಲೆ ಪ್ರಕರಣ ಗಳು ಘಟಿಸಿದವು. ಹೀಗಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದರು.

ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಅನುಷ್ಟಾನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸುಮಾರು ಐವತ್ತು ಸಾವಿರ ಕಾರ್ತಕರ್ತರನ್ನು ಒಟ್ಟುಗೂಡಿಸಿ ವಿಧಾನ ಸೌಧದ ಎದುರು ಹೋರಾಟ ರೂಪಿಸಲಾಗುತ್ತಿದೆ. ಶೀಘ್ರದಲ್ಲಿಯೇ ಹೋರಾಟಕ್ಕೆ ಮುಹೂರ್ತ ನಿಗದಿಗೊಳಿಸಲಾಗುವುದು ಎಂದರು.

ಮುಖಂಡರಾದ ಸಾಯಬಣ್ಣ ಮಡಿವಾಳರ, ಸಂಜು ಕರ್ಪೂರಮಠ, ಫಯಾಕ್ ಕಲಾದಗಿ, ಸುರೇಶ ಬಿರಾದಾರ, ಸುರೇಶ ಜತ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net