

ಕುಶಾಲನಗರ: ವಚನ ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸಿ, ಅಚ್ಚು ಹಾಕಿಸುವ ಮೂಲಕ ಕನ್ನಡ ನಾಡನ್ನು ಕೈಲಾಸ ಮಾಡಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕೊಡಗು ವಿವಿ ವತಿಯಿಂದ ಚಿಕ್ಕ ಅಳುವಾರದ ವಿವಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಡಿನ ಯುಜನಾಂಗ ಹಾಗೂ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಫ.ಗು.ಹಳಕಟ್ಟಿ. ತಾಳೆ ಗರಿಯಲ್ಲಿದ್ದ ವಚನದ ಕಟ್ಟುಗಳನ್ನು ಸಂಗ್ರಹಿಸಲು ಅಪಾರ ಶ್ರಮಿಸಿದರು. ಶಾಲೆಗಳು ಹಾಗೂ ಸಹಕಾರಿ ಸಂಘಗಳನ್ನು ತೆರೆದು ಅಪಾರ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ. ಇಂತಹ ಆದರ್ಶ ವ್ಯಕ್ತಿಗಳ ಜೀವನ ದರ್ಶನ ಇಂದಿನ ಯುವಕರಿಗೆ ಮಾದರಿಯಾಗಬೇಕು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ತಮ್ಮ ಬದುಕನ್ನೇ ಧಾರೆಯೆರೆದ ಹಳಕಟ್ಟಿ ಇಲ್ಲದಿದ್ದರೆ ವಚನ ಸಾಹಿತ್ಯ ತನ್ನ ಹೊಳಪು ಕಳೆದುಕೊಳ್ಳುತ್ತಿತ್ತು. ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ, ಧಾರ್ಮಿಕ, ನೈತಿಕ ಕ್ರಾಂತಿ ವಿಶ್ವಕ್ಕೆ ಜೀವನದ ಸಂವಿಧಾನವನ್ನು ಕೊಟ್ಟಿತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಸಿ. ತಾರಾನಾಥ್ ಮಾತನಾಡಿ, ಫ.ಗು. ಹಳಕಟ್ಟಿ ಅವರ ಸಮಗ್ರ ಜೀವನ ಕೇವಲ ವಚನ ಸಾಹಿತ್ಯವಲ್ಲ. ನಾಡಿನ ಶ್ರೇಷ್ಠ ಕವಿ ಚೆನ್ನವೀರ ಕಣವಿ ಅವರು ಬರೆದಂತೆ ಅವರ ಸತ್ಕಾರ್ಯಗಳು ಸಮಾಜದ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿತ್ತು ಎಂದರು.
ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ, ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ವಿ.ವಿ. ಕುಲಸಚಿವ ಸುರೇಶ್ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ. ಶಿವಪ್ಪ, ಬೆಂಗಳೂರಿನ ಬಸವ ಬಳಗದ ಪ್ರಮುಖರಾದ ಸರ್ವಮಂಗಳ ಸೋಮಶೇಖರ್, ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಕೊಡಗು ವಿ.ವಿ. ಉಪನ್ಯಾಸಕ ಡಾ.ಜಮೀರ್ ಅಹಮದ್ ಇತರರಿದ್ದರು. ವಿವಿಯ ಸಂಶೋಧನಾ ವಿದ್ಯಾರ್ಥಿಗಳಾದ ಶಮಿತಾ, ಸ್ಮಿತಾ ತಂಡ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.