

ಹಾಸನ: ಕನ್ನಡವನ್ನು ಮರೆತರೆ ನಮಗೆ ನರಕವೇ ಪ್ರಾಪ್ತಿ ಎಂದು ನಾವು ನಂಬಿದ್ದೇವೆ. ನಾವೆಲ್ಲರೂ ಕನ್ನಡಿಗರು. ಕನ್ನಡಿಗರ ಮನಸ್ಸು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತದೆ. ಎಲ್ಲ ಭಾಷಿಗರೊಂದಿಗೆ ಸಹೋದರತ್ವದಿಂದಲೇ ಕಾಣುತ್ತಾರೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತದಿಂದ ಬುಧವಾರ ಮಧ್ಯಾಹ್ನ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿ, ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ಅವರು, ಕನ್ನಡ ರಥ ಯಾತ್ರೆ ಸುಗಮವಾಗಿ ನಡೆಯಲಿ. ನಮ್ಮ ಕನ್ನಡಾಂಬೆಯನ್ನು ಸ್ಮರಿಸಬೇಕು. ಕರ್ನಾಟಕವನ್ನು ಇಡೀ ಭಾರತದಲ್ಲಿ ಮೇರುಪಂತಿಯಲ್ಲಿ ನಿಲ್ಲಿಸಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಪ್ರಾಂತ್ಯವನ್ನು ಇಡೀ ಪ್ರಪಂಚಕ್ಕೆ ಪ್ರಖ್ಯಾತಿಸಿದ್ದಾರೆ. ಕರ್ನಾಟಕದ ಮತ್ತೊಂದು ಮುತ್ತು ರತ್ನವಾದಂತಹ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳನ್ನು ಕನ್ನಡ ರಥಯಾತ್ರೆಯಲ್ಲಿ ಹಾಕಲಾಗಿದೆ. ಇಡೀ ಪ್ರಪಂಚದಲ್ಲಿಯೇ ಅನ್ನ ಕೊಡುವಂತಹ ರೈತರ ಒಂದು ನೇಗಿಲ ಯೋಗಿಯ ಪ್ರತಿಮೆಯನ್ನು ಸಹ ರಥದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಡಾ. ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ ನುಡಿ ಜಾತ್ರೆ, ಸಾಹಿತ್ಯ ಜಾತ್ರೆ, ಅಕ್ಷರ ಜಾತ್ರೆಯನ್ನು ಯಶಸ್ವಿಗಳಿಸೋಣ. ರಥಯಾತ್ರೆಯನ್ನು ನಮ್ಮ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಡಿಸೆಂಬರ್ 20ರಿಂದ 22ರವರೆಗೂ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, ನಾನು ಕರ್ನಾಟಕಕ್ಕೆ ಬಂದಾಗ ಮೊದಲು ಕೆಲಸ ಮಾಡಿದ್ದು ನಂಜನಗೂಡಿನಲ್ಲಿ. ಮೊದಲು ಭಾಗವಹಿಸಿದ್ದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಇಂತಹ ವೇಳೆ ಈ ರಥಯಾತ್ರೆ ಜತೆಗೆ ಇಂದು ಪಾಲ್ಗೊಂಡಿರುವುದು ಸಂತೋಷ ತಂದಿದೆ. ಸಾಹಿತ್ಯ ಸಮ್ಮೇಳನ ಎಂದರೆ ಏನು ಎನ್ನುವುದು ಎಲ್ಲರಿಗೂ ತಿಳಿಯಬೇಕು. ಮುಂದಿನ ಜನಾಂಗಕ್ಕೂ ಪಸರಿಸಬೇಕು ಎಂದು ಹೇಳಿದರು.
ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ ಅವರು ಮಾತನಾಡಿ, ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ. ಎರಡನೇ ಸ್ಥಾನದಲ್ಲಿ ಹಾಸನ. ಕನ್ನಡ ಭಾಷೆಗೆ ಅನೇಕ ಮಹನೀಯರು, ಸಾಹಿತಿಗಳ ಕೊಡುಗೆ ಇದೆ. ಕನ್ನಡ ಕೇವಲ ಭಾಷೆಯಲ್ಲ ತನ್ನದೆಯಾದ ನೆಲ, ಜಲ, ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ. ಭಾಷೆಯಲ್ಲಿ ತನ್ನದೇ ಆದಂತಹ ಶೈಲಿಯನ್ನು ಕೊಟ್ಟಂತಹ ಚರಿತ್ರೆಯನ್ನು ಎಲ್ಲರಿಗೂ ತಿಳಿಸೋಣ ಎಂದು ಹೇಳಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ತಹಸೀಲ್ದಾರ್ ಶ್ವೇತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಮತೇಶ್, ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಚಂದ್ರಶೇಖರ್, ಹಿರಿಯ ಕಲಾವಿದರಾದ ಗ್ಯಾರಂಟಿ ರಾಮಣ್ಣ, ಶಾಂತಕುಮಾರ್ ಯಲಗುಂದ ಹಾಗೂ ಇತರರು ಉಪಸ್ಥಿತರಿದ್ದರು.