

ಭಾಲ್ಕಿ: ಗಡಿಭಾಗದಲ್ಲಿ ಧಾರ್ಮಿಕ ಸೇವೆ ಜತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ-೨೦೨೫ ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ೨೬ನೇ ಸ್ಮರಣೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರಭಾಷೆಯ ಆಡಳಿತದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದ ಸಂರಕ್ಷಣೆಗೆ ಪೂಜ್ಯರು ತೋರಿದ ದಿಟ್ಟತನ ಮಾದರಿ ಎನಸಿದೆ. ಬಸವಾದಿ ಶರಣರ ವಾರಸುದಾರರಾಗಿ ಪೂಜ್ಯರು ಶಿಕ್ಷಣ ವಂಚಿತರಿಗೆ ಅಕ್ಷರ, ಬಡವರಿಗೆ ಅನ್ನ ಮತ್ತು ದುರ್ಬಲ ವರ್ಗದವರಿಗೆ ಆಶ್ರಯ ಕಲ್ಪಿಸಿ ಮಹಾತ್ಮರಾಗಿದ್ದಾರೆ. ಸಿದ್ಧಗಂಗೆ, ಸುತ್ತೂರು, ಆದಿಚುಂಚನಗಿರಿ ಮಠದ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತರಿಸಿದೆ. ಇಲ್ಲಿಯ ಭಕ್ತರು ಶ್ರೀಮಠದ ಬೆಳವಣಿಗೆಗೆ ಸದಾ ದುಡಿಯುತ್ತಿರುವುದು ಅಭಿಮಾನ ತರಿಸಿದೆ ಎಂದು ತಿಳಿಸಿದರು.
ಕವಲಗಿ ಜಗದ್ಗುರು ಶಿವಯೋಗಿ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠದ ಶ್ರೀ ಡಾ.ಅಭಿನವ ಸಿದ್ರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚನ್ನಬಸವ ಶಿಖಾರವಾನೆ, ಮಲ್ಲಿಕಾರ್ಜುನ ನಾಗಮಾರಪಳ್ಳಿ ವಚನ ಸಂಗೀತ ನಡೆಸಿಕೊಟ್ಟರು. ಕುಮಾರಿ ಆದಿತಿ ಎ ಮೈಸೂರು, ಬೀದರ್‌ನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ವಚನ ನೃತ್ಯ ನಡೆಸಿಕೊಟ್ಟರು. ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು.
ಲಿಂಗಾಯತರು ಸಂಘಟಿತರಾಗಲಿ: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ವಿಶ್ವದ ಶ್ರೇಷ್ಠ ಧರ್ಮವಾಗಿದೆ ಎಂದು ಕಲಬುರಗಿಯ ಹಿರಿಯ ಸಾಹಿತಿ ನಾಡೋಜ ಕುಂ.ವೀರಭದ್ರಪ್ಪ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ಒಡಕು ನಿಲ್ಲಬೇಕು.ಸಂಘಟಿತರಾಗಿ ಹೋರಾಟ ಮಾಡಿದರೇ ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಶಕ್ತಿ ಬರಲಿದೆ ಎಂದು ತಿಳಿಸಿದರು. ಗುಳೇದಗುಡ್ಡ ಜಗದ್ಗುರು ಗುರುಸಿದ್ಧೇಶ್ವರ ಬ್ರಹ್ಮಠದ ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಸಾಯಿಗಾಂವ ಶಿವಾನಂದ ಸ್ವಾಮೀಜಿ, ಕಲಬುರಗಿ ಶರಣಬಸವೇಶ್ವರ ದಾಸೋಹ ಮಠದ ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಮೈತ್ರಾದೇವಿ ತಾಯಿ, ಡಾ.ಮಹಾದೇವಮ್ಮ ತಾಯಿ ಸಮ್ಮುಖ ವಹಿಸಿದ್ದರು. ಕಲಬುರಗಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ, ಅನಿಲಕುಮಾರ ಬೆಲ್ದಾರ, ವಿಜಯಕುಮಾರ ಸೋನಾರೆ ಇತರರಿದ್ದರು.
ಯಕ್ಷಗಾನ ಬಯಲಾಟ: ಕುಮಾರ ಆರ್ಯ ಮತ್ತು ಮಹೇಶ್ವರ ಅವರು ನಡೆಸಿಕೊಟ್ಟ ಯಕ್ಷಗಾನ ಬಯಲಾಟ ನೆರೆದ ಭಕ್ತರ ಗಮನ ಸೆಳೆಯಿತು. ದೀಪಕ ಠಮಕೆ ನಿರೂಪಣೆ ಮಾಡಿದರು. ವೀರಣ್ಣ ಕುಂಬಾರ ವಂದಿಸಿದರು. ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವಿಶೇಷ ಸನ್ಮಾನ: ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಮತ್ತು ಕಲಬುರಗಿ ಸಮಾಜ ಸೇವಕ ಉಮೇಶ ಶೆಟ್ಟಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಭಾಲ್ಕಿ ಶ್ರೀಮಠ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಮೂಲಕ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಬಸವತತ್ವದ ಆಧಾರದ ಮೇಲೆ ನಡೆಯುತ್ತ ಎಲ್ಲ ಮಠಾಧೀಶರಿಗೆ ಆದರ್ಶಪ್ರಾಯವಾಗಿದೆ.
| ಡಾ.ಶಿವಾನಂದ ಮಹಾಸ್ವಾಮೀಜಿ
ಗುರು ಬಸವೇಶ್ವರ ಸಂಸ್ಥಾನ ಮಠ ಹುಲಸೂರು