

ಕಲಬುರಗಿ: ಕನ್ನಡ ಬೆಳೆಸುವುದಕ್ಕಿಂತ ಈಗಿರುವುದನ್ನು ಉಳಿಸಿಕೊಂಡು ಹೋಗುವುದು ಮುಖ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಕನ್ನಡಭವನ ಸುವರ್ಣ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಕನ್ನಡಾಭಿಮಾನದ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಆಂಗ್ಲ ಭಾಷೆಯ ಪ್ರಭಾವಕ್ಕೊಳಗಾಗಿ ಮಾತೃ ಭಾಷೆ ಕಡೆಗಣಿಸುತ್ತಿವುದು ತರವಲ್ಲ ಎಂದ ತಂಗಡಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವರ್ಷ ಪೂರ್ತಿ ಕನ್ನಡ ಉಳಿಸಿ ಅಭಿಯಾನ ಹಮ್ಮಿಕೊಂಡಿದು ಶ್ಲಾಘನೀಯ. ಈ ತೆರನಾದ ಕಾರ್ಯಕ್ರಮಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲï ತೇಗಲತಿಪ್ಪಿ, ಕಸಾಪದಿಂದ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲೂ ಕನ್ನಡ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಸಾಹಿತ್ಯ ಸೇರಿ ಎಲ್ಲ ಕ್ಷೇತ್ರಗಳಿಗೂ ಕಸಾಪ ಆದ್ಯತೆ ನೀಡುತ್ತಿದೆ. ಹೀಗಾಗಿ ಜನ ಸಾಮಾನ್ಯರ ಪರಿಷತ್ತಾಗಿ ಕೆಲಸ ಮಾಡುತ್ತಿದೆ ಎಂದರು.
ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಒಂದು ಕೋಟಿ ಸದಸ್ಯತ್ವ ನೋಂದಣಿ ಗುರಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಈ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಸಚಿವರ ಆಪ್ತ ಸಹಾಯಕ ಮಧುಸೂದನ ರೆಡ್ಡಿ, ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್, ಅಳ್ಳುಂಡಗಿ, ಯಾದಗಿರಿ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಬೀದರ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೊಪ್ಪಳ ಅಧ್ಯಕ್ಷ ಶರಣಗೌಡ ಪಾಟೀಲ್, ಡಾ.ಯಶವಂತರಾವ ಅಷ್ಟಗಿ, ಗುಂಡೇರಾವ್ ಮುಡುಬಿ ಇತರರು ಇದ್ದರು.
ಸಿದ್ಧಾರ್ಥ ಚಿಮ್ಮಾ ಇದಲಾಯಿ ಪ್ರಾರ್ಥಿಸಿದರು. ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಸ್ವಾಗತಿಸಿದರು. ಕಲ್ಯಾಣರಾವ್ ಶೀಲವಂತ ವಂದಿಸಿದರು. ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು.