

ಸಿಂಧನೂರು :ಪ್ರಾಚೀನ ಇತಿಹಾಸ ಹೊಂದಿದ ಕನ್ನಡ ಭಾಷೆ ಅನ್ನಭಾಷೆಯಾಗಿದ್ದು, ಶಿಕ್ಷಕರು ಮಕ್ಕಳಿಗೆ ಕನ್ನಡ ಸಾಹಿತ್ಯಾಭಿರುಚಿ ರೂಢಿಸಬೇಕು ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗಸ್ವಾಮೀಜಿ ಹೇಳಿದರು.
ತಾಲೂಕಿನ ಒಳಬಳ್ಳಾರಿಯಲ್ಲಿ ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರದ ಸಾನ್ನಿಧ್ಯವಹಿಸಿ ಮಾತನಾಡಿದರು. ಕನ್ನಡ ಭಾಷೆಯು ಅನ್ನದ ಭಾಷೆಯಾಗಿದೆ.
ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಕಲಿಕೆಗೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವುದು ಮುಖ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಚರ್ಚಿಸಿದ ಎಲ್ಲಾ ವಿಷಯಗಳು ಕಾರ್ಯಗಾರಕ್ಕೆ ಸೀಮಿತವಾಗದೆ, ತರಗತಿಗಳ ಕೊಠಡಿಗಳಲ್ಲಿ ಅನುಷ್ಠಾನವಾಗಬೇಕು. ವಿಷಯ ಶಿಕ್ಷಕರು,ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಮುತುವರ್ಜಿವಹಿಸಿ ಬೋಧನಾ ಕಾರ್ಯ ಕೈಗೊಳ್ಳಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ, ತಾಲೂಕು ಕನ್ನಡ ಭಾಷಾ ವಿಷಯ ಬೋಧಕರ ವೇದಿಕೆ ಅಧ್ಯಕ್ಷ ಬಸವರಾಜ ಬಿಳೇಕಲ್ಲ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಅಮರೇಶ, ಉಪಾಧ್ಯಕ್ಷೆ ರಮಾ, ಕಾರ್ಯದರ್ಶಿ ನಾಗರಾಜ, ಮುಖ್ಯಶಿಕ್ಷಕ ಹಂಪನಗೌಡ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.