

ಔರಾದ್: ಎರಡು ಸಾವಿರ ವರ್ಷಗಳ ಪ್ರಾಚೀನ ಇತಿಹಾಸವುಳ್ಳ ಕನ್ನಡ ಭಾಷೆ ಉಳಿವಿವಾಗಿ ಪೂರ್ವಜರು ಹಗಲಿರುಳು ಶ್ರಮಿಸಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ನಾವುಗಳು ಕಾಪಾಡಿಕೊಂಡು ಬಳುವಳಿಯಾಗಿ ನೀಡಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ)ಯಿಂದ ಪಟ್ಟಣದ ಇಕ್ರಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜ್ಞಾನ ದೇಗುಲದಲ್ಲಿ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ರಾಷ್ಟçಕೂಟರು, ಗಂಗರು, ಚಾಲುಕ್ಯರು, ಕದಂಬರು ಹೋರಾಡಿ ಕನ್ನಡ ಕಾಪಾಡಿದರು. ನಮ್ಮ ಪೂರ್ವಜರ ಹಾದಿಯಂತೆ ನಾವು ತಾಯಿ ಭಾಷೆಯಾಗಿರುವ ಕನ್ನಡತನ ಮೆರೆಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಮಾತನಾಡಿ, ರಾಜ್ಯೋತ್ಸವವನ್ನು ದೇಶ-ವಿದೇಶಗಳಲ್ಲಿಯೂ ಕನ್ನಡಿಗರು ಆಚರಿಸುತ್ತಿದ್ದಾರೆ. ಅಲ್ಲಿ ಕನ್ನಡಿಗರು ಒಟ್ಟುಗೂಡಿ ಕನ್ನಡ ಮಾತನಾಡುವುದು, ಕನ್ನಡ ಶಾಲೆ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯ. ನಮ್ಮ ಮಕ್ಕಳಿಗೆ ನಾವು ಆಂಗ್ಲ ವ್ಯಾಮೋಹ ಬಿಡಬೇಕು. ಎಲ್ಲ ಭಾಷೆಯನ್ನು ಗೌರವದಿಂದ ಕಾಣಬೇಕು ಎಂದರು.
ಹೋರಾಟಗಾರ ಬಸವರಾಜ ಶೇಟಕಾರ ಮಾತನಾಡಿ, ಕನ್ನಡ ಶಾಲೆಗಳು ಉಳಿದರೆ ಮಾತ್ರ ಗಡಿಯಲ್ಲಿ ಕನ್ನಡ ಇರುತ್ತದೆ. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಪುಸ್ತಕದ ಶ್ರೀಮಂತಿಕೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದರು. ಪ್ರಮುಖರಾದ ಮಲ್ಲಮ್ಮ ರಾಜೇಂದ್ರಕುಮಾರ ಮೇತ್ರೆ, ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ, ಬಾಲಾಜಿ ದಾಮ, ಕೇಶು ಹಕ್ಕೆ, ಸಂಗಮೇಶ ಇತರರಿದ್ದರು.