ಕನ್ನಡ ಉಳಿದು ಬೆಳೆಯಲು ಚಾಲಕರೇ ಕಾರಣ

29blrp1
ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಲಕರಿಗೆ ಸಮವಸ್ತ್ರ ವಿತರಿಸುತ್ತಿರುವ ಗಣ್ಯರು.
Published on

ಬೇಲೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಉಳಿದು ಬೆಳೆದಿದೆ ಎಂದರೆ ಅದಕ್ಕೆ ಚಲನಚಿತ್ರ ನಟ ದಿ.ಶಂಕರ್‌ನಾಗ್, ಆಟೋ ಹಾಗೂ ಇನ್ನಿತರ ವಾಹನಗಳ ಚಾಲಕರೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಅಭಿಪ್ರಾಯಪಟ್ಟರು.

ಬೇಲೂರು ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಹುಲ್ಲಹಳ್ಳಿ ಸುರೇಶ್ ಅಭಿಮಾನಿಗಳು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಆಟೋ, ಟ್ಯಾಕ್ಸಿ ಹಾಗೂ ಇತರ ವಾಹನಗಳ ಚಾಲಕರಿಗೆ ಸಮವಸ್ತ್ರ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಡಿ ಕಾಯುವ ಸೈನಿಕರ ದೇಶ ಸೇವೆ, ರೈತರ ಭೂತಾಯಿ ಸೇವೆ, ಚಾಲಕರ ಸೇವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಚಾಲಕರು ಪ್ರತಿಯೊಂದು ಕ್ಷೇತ್ರದಲ್ಲಿದ್ದಾರೆ. ಅವರ ಜಾಗರೂಕ ಚಾಲನೆಯಿಂದ ಸಾಕಷ್ಟು ಕುಟುಂಬಗಳು ಹಗಲು- ರಾತ್ರಿ ಎನ್ನದೆ ಯಾವುದೇ ತೊಂದರೆಯಾಗದಂತೆ ತಮ್ಮ ಮನೆ ಸೇರುತ್ತಿದ್ದಾರೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಬೇಲೂರು ಕ್ಷೇತ್ರದ ಎಲ್ಲ ಚಾಲಕರನ್ನು ಒಂದೆಡೆ ಸೇರಿಸಿ ಸನ್ಮಾನಿಸಬೇಕು ಎಂಬ ಆಶಯ ಹೊಂದಿದ್ದೆವು. ಆದರೆ ಹಲವು ಕಾರಣಗಳಿಂದ ಇದು ಸಾಧ್ಯವಾಗಿಲ್ಲ. ಎಲ್ಲೆಲ್ಲಿ ಚಾಲಕರಿದ್ದಾರೋ ಅಲ್ಲಿಗೆ ತೆರಳಿ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಮಾಡುವ ಸೇವಾ ಕಾರ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿದರು. ಅರ್ಬನ್ ಬ್ಯಾಂಕ್ ನಿರ್ದೇಶಕ ತಾರಾನಾಥ್, ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ಮುಖಂಡ ಪೈಂಟ್ ರವಿ, ಧರ್ಮದರ್ಶಿ ರವಿಶಂಕರ್, ವಿಜಯಲಕ್ಷ್ಮೀ, ವಾಹನಗಳ ಚಾಲಕರಾದ ನರಸಿಂಹಣ್ಣ, ಪಾಪಣ್ಣ, ಲೋಕೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net