ಕನ್ನಡ ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ

15ark2
ಅರಕಲಗೂಡಿನಲ್ಲಿ ಮಂಗಳವಾರ ಸಂಜೆ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಡಾ. ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿಯನ್ನು ಲೇಖಕಿ ಬೇಲೂರು ಪಲ್ಲವಿ, ಹೇಮಾಕ್ಷಮ್ಮ ದತ್ತಿ ಪ್ರಶಸ್ತಿಯನ್ನು ನವೀನ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಎ.ಟಿ. ರಾಮಸ್ವಾಮಿ, ಆರ್.ಕೆ ಪದ್ಮನಾಭ ಇತರರಿದ್ದರು.
Published on

ಅರಕಲಗೂಡು: ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡಕ್ಕೆ ಒಳ್ಳೆಯ ಗೌರವ ಸಿಗುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಸಂಸ್ಕೃತಿ ಇಲ್ಲವಾಗುತ್ತಿದೆ. ಕನ್ನಡದ ಹೆಸರು, ಅಂಕಿಗಳನ್ನು ಸಹ ತಪ್ಪಾಗಿ ಬರೆದು ಪಟ್ಟಣ ಪ್ರದೇಶಗಳಲ್ಲಿ ಮಾತೃಭಾಷೆಯನ್ನು ಅವಮಾನಿಸಲಾಗುತ್ತಿದೆ. ಇಂತಹ ಪ್ರವೃತ್ತಿಯನ್ನು ತಡೆಗಟ್ಟಲು ಸರ್ಕಾರದ ಜತೆ ಕನ್ನಡಿಗರು ಜಾಗೃತರಾಗಬೇಕು ಎಂದು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿದ್ವಾನ್ ಆರ್.ಕೆ. ಪದ್ಮನಾಭ ತಿಳಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಕನ್ನಡ ಉಳಿದಿರುವುದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ. ಮುಂದುವರಿದ ಮಹಾ ನಗರಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹುಡುಕುವುದು ಭ್ರಮೆ ಎನಿಸಿದೆ. ನಗರಗಳಲ್ಲಿ ಕನ್ನಡಕ್ಕೆ ಅಪಮಾನವಾಗುತ್ತಿದೆ. ಡಾ.ರಾಜಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರು ಚಿತ್ರರಂಗದ ಮುಖೇನ ಮಾತ್ರವಲ್ಲದೇ ಸಾರ್ವಜನಿಕ ಬದುಕಿನಲ್ಲಿ ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿಗೆ ಎತ್ತರದ ಗೌರವ ತಂದುಕೊಡುವಲ್ಲಿ ಸಾಹಿತ್ಯ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸಿರುವುದು ನೆಮ್ಮದಿಯ ಸಂಗತಿಯಾಗಿದೆ ಎಂದರು.

175 ಸಂಗೀತ ವಿದ್ವಾಂಸರನ್ನು ಹೊಂದಿದ್ದ ರುದ್ರಪಟ್ಟಣದಲ್ಲಿ ಜನಿಸಿದ ನಾನು ನಾದ ದೇವತೆ ಉಪಾಸನೆ ಮಾಡಿದ ಫಲದಿಂದಾಗಿ ಜಿಲ್ಲಾ ಸಮ್ಮೇಳನಾಧ್ಯಕ್ಷಗಿದ್ದು ನನ್ನ ಸೌಭಾಗ್ಯ. ಜಾನಪದ ಗೋಷ್ಠಿ ನನ್ನ ಹೃದಯಕ್ಕೆ ನಾಟಿದೆ. ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನಗೊಂಡಿರುವುದು ಈ ಸಮ್ಮೇಳನದ ಮಹತ್ವವಾಗಿದೆ. ಕನ್ನಡವೇ ನನ್ನ ತಾಯಿ ಕನ್ನಡವೇ ತಂದೆ ಕನ್ನಡವೇ ಬಂಧು ಬಳಗ ಎಂದು ಸಂಗೀತ ರಾಗಸುಧೆ ಹರಿಸುವ ಮೂಲಕ ಸಂಪನ್ನಗೊಂಡ ಸಮ್ಮೇಳನಕ್ಕೆ ಮಂಗಳ ಹಾಡಿದರು.

ಶಾಸಕ ಎ.ಟಿ.ರಾಮಸ್ವಾಮಿ ಸಮಾರೋಪ ಭಾಷಣ ಮಾಡಿ, ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಭಿರುಚಿ ಕಳೆದುಕೊಂಡು ಕನ್ನಡಿಗರು ಅಭಿಮಾನ ಶೂನ್ಯರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಇನ್ನೂ ಹಾಡುತ್ತಿದ್ದೇವೆಯೇ ಹೊರತು ಉದಯವಾಗಿದೆ ಎಂದು ಹಾಡುವ ಕಾಲ ಇನ್ನೂ ಒದಗಿ ಬಂದಿಲ್ಲ. ನಾಡು, ನುಡಿ ಕುರಿತಂತೆ ಜನರು ಜಾಗೃತಗೊಳ್ಳದಿದ್ದರೆ ಪರಂಪರೆಯಿಂದ ಸಾಗಿಬಂದ ನಮ್ಮ ಸಂಸ್ಕೃತಿ ಮರೆಯಾಗಿ ಹೋಗಲಿದೆ. ಈ ಕುರಿತು ಜನರನ್ನು ಜಾಗೃತಿಗೊಳಿಸುವ ಅನಿವಾರ್ಯತೆ ಒದಗಿದೆ ಎಂದರು.

ನೈತಿಕ ಮೌಲ್ಯಗಳಿಗೆ ನಾವೆಷ್ಟು ಬೆಲೆ ಕೊಡುತ್ತಿದ್ದೇವೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಅಕ್ಷರಸ್ಥರು ಹೆಚ್ಚಾಗಿದ್ದು ನಾಗರಿಕತೆ ಮುಂದುವರಿದಿದ್ದರೂ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳು ದಿನೇ ದಿನೆ ಕುಸಿಯುತ್ತಿದೆ. ನಾವು ಸುಭದ್ರ ನಾಡು ಕಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಈ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾಗೃತಿ ಮೂಡಿಸಲು ಹೆಚ್ಚು ಕೆಲಸ ಮಾಡಬೇಕಿದೆ. ಡಾ.ಆರ್.ಕೆ.ಪದ್ಮನಾಭ ಅವರು ಸರ್ವಾಧ್ಯಕ್ಷರಾಗಿದ್ದು ಈ ಸಮ್ಮೇಳನಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ. ಬಹಳ ಅಚ್ಚುಕಟ್ಟಾಗಿ ನಡೆದ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿಯನ್ನು ಲೇಖಕಿ ಬೇಲೂರು ಪಲ್ಲವಿ, ಹೇಮಾಕ್ಷಮ್ಮ ದತ್ತಿ ಪ್ರಶಸ್ತಿಯನ್ನು ನವೀನ್‌ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಸಲಹೆಗಾರ ಜೆ.ಆರ್.ಕೆಂಚೇಗೌಡ, ಮಾಜಿ ಅಧ್ಯಕ್ಷ ಉದಯರವಿ, ಉಪನ್ಯಾಸಕ ಡಿ.ಕೆ.ಕುಮಾರಯ್ಯ, ಚಂದ್ರಶೇಖರ್, ಎಚ್.ಎಂ.ದಯಾನಂದ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಯರಾಂ, ಗೌರವ ಕಾರ್ಯದರ್ಶಿಗಳಾದ ಬಿ.ಆರ್.ಬೊಮ್ಮೇಗೌಡ, ಜಾವಗಲ್ ಪ್ರಸನ್ನ ಕುಮಾರ್, ಯುವಜನ ಕ್ರೀಡಾ ಇಲಾಖೆ ಅಧಿಕಾರಿ ಸಿ.ಕೆ.ಹರೀಶ್ ಇತರರಿದ್ದರು.

ಗಾಯಕಿ ಸುನೀತಾ ಮತ್ತು ಕಿರುತೆರೆ ನಿರೂಪಕಿ ಅಪರ್ಣಾ ತಂಡ ನಡೆಸಿದ ಕನ್ನಡ ಗೀತೋತ್ಸವ ಕನ್ನಡಾಭಿಮಾನಿಗಳ ಮನಸೂರೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net