ಕನ್ನಡ ಅನುಷ್ಠಾನ ರ್ನಿಣಯ ಜಾರಿಗೊಳಿಸಿ

Kannada
Published on

ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಎಲ್ಲ ವ್ಯವಹಾರಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಕಳೆದ ಜುಲೈ 18ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್​. ನಾಗಾಭರಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆಯ ರ್ನಿಣಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು, ಬೆಳಗಾವಿ ಜಿಲ್ಲಾ ಕನ್ನಡ ಸಂಟನೆಗಳ ಕ್ರಿಯಾ ಸಮಿತಿಯು ಗುರುವಾರ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಬೆಳಗಾವಿ, ನಿಪ್ಪಾಣಿ, ಖಾನಾಪುರ ಪ್ರದೇಶಗಳಲ್ಲಿಯ ಎಲ್ಲ ಅಂಗಡಿ ಹೋಟೆಲ್​ ವಾಣಿಜ್ಯ ಮಳಿಗೆಗಳ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಾಧಾನ್ಯತೆ ನೀಡಿ ಬಳಸಬೇಕು. ಉದ್ಯಾನ ಮತ್ತು ರಸ್ತೆಗಳಿಗೆ ಕನ್ನಡದ ಗಣ್ಯರ ಹೆಸರುಗಳನ್ನು ನಾಮಕರಣ ಮಾಡಬೇಕು. ಶಿಕ್ಷಣ ಮತ್ತು ಕಚೇರಿಯ ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿಯೇ ಇರಬೇಕು ಎಂದು ಪ್ರಾಧಿಕಾರ ನಡೆಸಿದ ಸಭೆಯಲ್ಲಿ ಸೂಚಿಸಲಾಗಿದೆ. ಅಲ್ಲದೇ ಈ ರ್ನಿಣಯಗಳನ್ನು 15 ದಿನಗಳಲ್ಲಿ ಜಾರಿ ಮಾಡಲು ಗಡುವು ನೀಡಲಾಗಿದೆಯೆಂದು ಕ್ರಿಯಾ ಸಮಿತಿ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.

ಗಡಿ ಭಾಗದಲ್ಲಿ ಭಾಷಾ ಅಲ್ಪ ಸಂಖ್ಯಾತರಿಗೆ ಅವರ ಭಾಷೆಯಲ್ಲಿ ಸರ್ಕಾರಿ ದಾಖಲೆಗಳನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರಿ 2003 ರಲ್ಲಿ ಹೊರಡಿಸಿದ ಆದೇಶವನ್ನು 2004ರ ಮೇ ತಿಂಗಳಲ್ಲಿ ಹಿಂತೆಗೆದುಕೊಂಡು ಹೊರಡಿಸಿದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳು ಕ್ರಿಯಾ ಸಮಿತಿಯ ನಿಯೋಗಕ್ಕೆ ನೀಡಿದರು.

ಕೆಲವು ನಾಡ ವಿರೋಧಿ ಶಕ್ತಿಗಳು ಕರ್ನಾಟಕ ಸರ್ಕಾರದ ಆದೇಶದ ಬಗ್ಗೆ ಮುಗ್ಧ ಮರಾಠಿಗರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಈ ಬಗ್ಗೆ ಸಾಮಾನ್ಯ ಮರಾಠಿಗರು ಜಾಗರೂಕತೆಯಿಂದ ಇರಬೇಕೆಂದು ಕ್ರಿಯಾ ಸಮಿತಿಯು ಮನವಿ ಮಾಡಿದೆ. ಅಶೋಕ ಚಂದರಗಿ, ಎಂ.ಜಿ. ಮಕಾನದಾರ, ಶಂಕರ ಬಾಗೇವಾಡಿ, ಸಾಗರ ಬೋರಗಲ್ಲ ಹಾಗೂ ವೀರೇಂದ್ರ ಗೋಬರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net