

ಔರಾದ್: ಛಂದಸ್ಸು, ವ್ಯಾಕರಣ, ಅಲಂಕಾರ ಮುಂತಾದ ಮೌಲಿಕ ವಿಷಯಗಳನ್ನು ಹೊಂದಿರುವ ಕನ್ನಡ ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಎಂದು ಪಿಎಸ್ಐ ಉಪೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಯಿಂದ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜ್ಞಾನ ದೇಗುಲದಲ್ಲಿ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆ ಇತಿಹಾಸ ಅಮೋಘವಾದದ್ದು. ಬಹಳ ಹಿಂದೆಯೇ ನಮ್ಮ ಕವಿಗಳು ಹಾಗೂ ಸಾಹಿತಿಗಳು ಕನ್ನಡದ ಕಂಪನ್ನು ಹಾಡಿ ಹೊಗಳಿದ್ದಾರೆ. ಕನ್ನಡ ನಾಡು, ನುಡಿ ವೈವಿಧ್ಯಮಯದಿಂದ ಕೂಡಿದೆ. ಈ ಸುಂದರ ನಾಡಿನಲ್ಲಿ ವಾಸವಿರುವ ನಾವೇ ಧನ್ಯರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಮಾತನಾಡಿ, ಮಕ್ಕಳಿಗೆ ಕನ್ನಡದಲ್ಲೇ ಶಿಕ್ಷಣ ನೀಡುವ ಮೂಲಕ ಮಾತೃಭಾಷೆ ಬೆಳವಣಿಗೆಗೆ ಸಹಕರಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
ವಚನ ಸಾಹಿತ್ಯ, ಜಾನಪದ, ಹಿರಿಯ ಸಾಹಿತಿಗಳು ರಚಿಸಿದ ಗ್ರಂಥಗಳಲ್ಲಿ ಕನ್ನಡದ ಹಿರಿಮೆ ಕಾಣಬಹುದು. ಕನ್ನಡಿಗರಾದ ನಾವು ಅನ್ಯಭಾಷೆಗಳ ವ್ಯಾಮೋಹಕ್ಕೆ ಒಳಗಾಗುತ್ತ ಮಾತೃ ಭಾಷೆಯನ್ನು ಕಡೆಗಣಿಸುತ್ತಿರುವುದು ವಿಷಾದನೀಯ. ಕನ್ನಡದ ಮಹತ್ವ ಕರಿತು ನಿರಂತರ ಬೆಳೆಸುವ ಹೊಣೆ ನಮ್ಮದಾಗಬೇಕು ಎಂದರು.
ಪ್ರಮುಖರಾದ ಅನೀಲ ದೇವಕತ್ತೆ, ಧೂಳಪ್ಪ ಮಾಳೆನೋರ್ ಇತರರಿದ್ದರು. ಮಹಾದೇವ ಚಿಟಗಿರೆ ನಿರೂಪಣೆ ಮಾಡಿದರು.