

ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿಯಲ್ಲಿ ಗ್ರಾಮದೇವತೆ ಕನ್ನಂಬಾಡಿ ಅಮ್ಮನವರ ಮೆರವಣಿಗೆ ಹಾಗೂ ಪೂಜಾ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಅಲಂಕೃತಗೊಂಡ ಕನ್ನಂಬಾಡಿ ಅಮ್ಮನವರ ಮೂರ್ತಿಯನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಹೊರವಲಯದಲ್ಲಿರುವ ಕನ್ನಂಬಾಡಮ್ಮನ ದೇವಾಲಯದ ಬಳಿಗೆ ಮಹಿಳೆಯರು ಪ್ರಸಾದ ಮತ್ತು ನೈವೇದ್ಯಕ್ಕೆ ಅರಿಶಿಣ-ಕುಂಕುಮ, ಬೇವು ಮತ್ತು ಮಾವಿನ ಸೊಪ್ಪಿನೊಂದಿಗೆ ಅಲಂಕರಿಸಿ ತಲೆಯ ಮೇಲೆ ಹೊತ್ತು ಸಾಗಿದರು.
ಗ್ರಾಮಕ್ಕೆ ತಳಿರು ತೋರಣಗಳನ್ನು ಕಟ್ಟಿ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮೆರವಣಿಗೆ ನಂತರ ಕನ್ನಂಬಾಡಿ ಅಮ್ಮನ ದೇವಾಲಯದ ಮುಂಭಾಗ ಮಹಿಳೆಯರು ಸಾಲಾಗಿ ಕುಳಿತು ಅಮ್ಮನಿಗೆ ತಾವು ತಂದಿದ್ದ ಗಂಧದಕಡ್ಡಿ, ಕರ್ಪೂರ, ಹಣ್ಣು, ಕಾಯಿ, ಹೂವು, ಹಾರ, ನೈವೇದ್ಯ ಮುಂತಾದವುಗಳನ್ನು ಸಮರ್ಪಿಸಿದರು.