

ಚನ್ನರಾಯಪಟ್ಟಣ : ತಾಲೂಕಿನ ಕನುವನಘಟ್ಟ ಗ್ರಾಮದಲ್ಲಿ ಶ್ರೀ ಗೌರಿ ಹಾಗೂ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವವು ಸೋಮವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಶ್ರೀರಾಮ ಮಂದಿರದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದು ದಿನನಿತ್ಯವೂ ಪೂಜಾ ಕೈಂಕರ್ಯಗಳು ನೆರವೇರುತಿದ್ದವು. ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗುತಿದ್ದು ಅನ್ನಸಂತರ್ಪಣೆ ನಡೆಯುತಿತ್ತು.
ಮಹಾಲಯ ಅಮವಾಸ್ಯೆ ದಿನದಂದು ಪಿತೃಪಕ್ಷ ಆಚರಣೆಯೊಂದಿಗೆ ಮರುದಿನ ಬೆಳಗ್ಗೆ ಗಣೇಶ ವಿಸರ್ಜನೆ ಮಾಡುವುದು ವಾಡಿಕೆಯಾಗಿದ್ದು ಅದರಂತೆಯೇ ಸೋಮವಾರ ಬೆಳಗ್ಗೆ ಶ್ರೀ ವಿನಾಯಕ ವಿಸರ್ಜನಾ ಮಹೋತ್ಸವ ನಡೆಯಿತು.
ಮಂಗಳವಾಧ್ಯದೊಂದಿಗೆ ಪ್ರಾರಂಭಗೊಂಡ ಉತ್ಸವವು ಶ್ರೀರಾಮ ಮಂದಿರದ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಸಾಗಿತು. ದಿಡಗ ಗ್ರಾಮದ ಡಾ.ರಾಜ್ ವೃತ್ತ ಬಳಸಿ ಗ್ರಾಮದ ಕಟ್ಟೆಯ ಬಳಿಗೆ ತೆರಳಿತು. ಕಟ್ಟೆಯ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೀರಿನಲ್ಲಿ ವಿಸರ್ಜಿಸಲಾಯಿತು.
ಪ್ರಸಾದ-ವಿನಿಯೋಗ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಹರಿಪ್ರಸಾದ್, ಮಾಜಿ ಸದಸ್ಯ ಪರಮೇಶಚಾರ್, ಪ್ರಮುಖರಾದ ಕೆ.ವಿ.ರಮೇಶ್, ಚಂದ್ರಣ್ಣ, ತಿಮ್ಮೇಗೌಡ, ಕುಮಾರ್, ಸ್ವಾಮಿ ಹಾಗೂ ಇತರರು ಇದ್ದರು.