ಕನಿಷ್ಠ ವೇತನಕ್ಕೆ ಆಗ್ರಹಿಸಿ ಪೌರಕಾರ್ಮಿಕರಿಂದ ಧರಣಿ

10sunti01
Published on

ಸುಂಟಿಕೊಪ್ಪ: ಪೌರಕಾರ್ಮಿಕರ ಕಾಯಂ ಹಾಗೂ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಪೌರ ಕಾರ್ಮಿಕರು ಸಾಂಕೇತಿಕವಾಗಿ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇದೆ. ಆದರೆ ಅವರು ಸಬೂಬು ಹೇಳುತ್ತ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಕಾಯಂಗೊಳಿಸುವ ಆದೇಶಕ್ಕೆ ಸೆ.21 ರೊಳಗೆ ಅನುಮೋದನೆ ನೀಡದಿದ್ದಲ್ಲಿ ಸೆ.22 ರಂದು ಪೌರಕಾರ್ಮಿಕರು ಹಾಗೂ ನೀರುಗಂಟಿ ಕೆಲಸ ನಿರ್ವಹಿಸುವವರು ಒಂದು ದಿನದ ಸಾಂಕೇತಿಕ ಮುಷ್ಕರವನ್ನು ನಡೆಸಲಿದ್ದೇವೆ. ಒಂದು ವೇಳೆ ಆಗಲೂ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಭರತ್ ಎಚ್ಚರಿಕೆ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಆದಾಯವಿದ್ದು, ಸ್ವಚ್ಛತಾಗಾರರು ನೀರು ಗಂಟಿಗಳ ಕನಿಷ್ಠ ವೇತನ ಹೆಚ್ಚಳಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಪ್ಪಿನಿಂದ ಹಿಡಿದು ಕರ್ಪೂರದವರೆಗೂ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಗರಿಷ್ಠ ವೇತನ 31 ಸಾವಿರ ರೂ. ಹಾಗೂ ಕನಿಷ್ಠ 23 ಸಾವಿರದವರೆಗೂ ವೇತನ ನೀಡಬೇಕೆಂಬ ಆದೇಶವಿದ್ದರೂ ಈ ಪಂಚಾಯಿತಿಯವರು ಬೆಲೆ ನೀಡುತ್ತಿಲ್ಲ ಎಂದು ದೂರಿದರು.

ಗ್ರಾಮ ಪಂಚಾಯಿತಿ ಕಾರ್ಮಿಕ ವೀರಭದ್ರ ಮಾತನಾಡಿ, ಸೆ. 22ರಂದು ಕಾರ್ಮಿಕರ ಧರಣಿಯು ನಡೆಯುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ, ನೀರು ಗಂಟಿಗಳ ಕಾರ್ಯ ಸೇರಿದಂತೆ ಇತರ ಕೆಲಸವನ್ನು ಸ್ಥಗಿತಗೊಳಿಸಲಾಗುವುದು. ಅಂದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.

ಪೌರಕಾರ್ಮಿಕರಿಗೆ ಮನೆ ಮತ್ತು ಕನಿಷ್ಠ ವೇತನ ಕೂಡ ಲಭ್ಯವಾಗುತ್ತಿಲ್ಲ. ಈ ಬೇಡಿಕೆಗಳನ್ನು ಸೇರಿಸಿಕೊಂಡು ಸೆ.22 ರ ಸಾಂಕೇತಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರ ಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net