ಕನಿಷ್ಠ ವೇತನ, ಪಿಎಫ್ ಗೆ ಒತ್ತಾಯ ಹೊರಗುತ್ತಿಗೆ ನೌಕರರ ಧರಣಿ

IMG-20220722-WA0016.jpg
Published on

ದಾವಣಗೆರೆ: ಕನಿಷ್ಠ ವೇತನ, ಐಪಿಎಫ್, ಇಎಸ್‌ಐ ಸೌಲಭ್ಯ ನೀಡುವಂತೆ ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೊರಗುತ್ತಿಗೆ ನೌಕರರು, ಶುಕ್ರವಾರ ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸಿದರು.

ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ ಸಿ ಆ್ಯಂಡ್ ಡಿ ದರ್ಜೆ ನೌಕರರ ಸಂಘದ ಜಿಲ್ಲಾ ಶಾಖೆಯಡಿ ಪ್ರತಿಭಟನೆ ನಡೆಸಿ ಆಸ್ಪತ್ರೆ ಅಧೀಕ್ಷಕ ಡಾ. ಮಧು ಅವರಿಗೆ ಮನವಿಪತ್ರ ಸಲ್ಲಿಸಿದರು. ಸುಮಾರು 15-20 ವರ್ಷಗಳಿಂದ ಸ್ವಚ್ಛತಾಗಾರರು, ಸೆಕ್ಯೂರಿಟಿ ಗಾರ್ಡ್, ದೋಬಿ, ಶೌಚಗೃಹ ಸ್ವಚ್ಛತಾಗಾರರು ಹೊರಗುತ್ತಿಗೆ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ. ವಾರದ ರಜೆ, 8 ಗಂಟೆಗಳ ಕೆಲಸ, ವೇತನ ಚೀಟಿ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಾಲ್ಕು ಏಜೆನ್ಸಿಯಡಿ ಕಾರ್ಮಿಕ ಕಾಯ್ದೆಗಳ ಅನ್ವಯ ಕನಿಷ್ಟ ವೇತನ, ಐಪಿಎಫ್, ಇಎಸ್‌ಐ ಅನ್ನು ಸರಿಯಾಗಿ ನೀಡಲಾಗಿಲ್ಲ. ಮೆಲ್ನೋಟಕ್ಕೆ ಏಜೆನ್ಸಿಯವರು ಕಾರ್ಮಿಕರಿಗೆ ಐ.ಪಿ.ಎಫ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. 15 ವರ್ಷ ಅನುಭವವುಳ್ಳ ಹರೀಶ, ಮಹೇಶ ಹಾಗೂ ಪರಶುರಾಂ ಈ ಮೂವರನ್ನೂ ಕೆಲಸದಿಂದ ತೆಗೆದುಹಾಕಿ ಭೇರೆ ಕಾರ್ಮಿಕರನ್ನು ನೇಮಿಸಿಕೊಂಡಿರುವುದು ಅಕ್ಷಮ್ಯ. ಕೂಡಲೆ ಇವರನ್ನು ಮರು ನೇಮಕ ಮಾಡಬೇಕು. ಕಾರ್ಮಿಕರಿಗೆ ಕಡ್ಡಾಯವಾಗಿ ನೇಮಕಾತಿ ಪತ್ರ, ಗುರುತಿನ ಚೀಟಿ, ಸಮವಸ್ತ್ರ ವಿತರಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಸಂಘಟನಾಕಾರರಾದ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ಕಾರ್ಮಿಕರಾದ ರವಿಕುಮಾರ್, ನೇತ್ರಮ್ಮ, ನೀಲಮ್ಮ, ಉಚ್ಚೆಂಗಮ್ಮ, ಮಹೇಶ್, ಗದಿಗೆಪ್ಪ, ದ್ಯಾಮವ್ವ, ಮೀನಾಕ್ಷಮ್ಮ, ಜಯಮ್ಮ, ಫರೀದಾ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net